ಅಪಘಾತ ಪ್ರಕರಣಕ್ಕೆ ಕೊಲೆಗೆ ಪ್ರಚೋದನೆಯ ಸೆಕ್ಷನ್ ಅಡಿ ಬಸ್ಸು ನೌಕರರ ಬಂಧನ : ಬಸ್ಸು ನೌಕರರ ಸಂಘದಿಂದ ಪ್ರಬಲ ವಿರೋಧ

ಪಿಯುಸಿ ವಿದ್ಯಾರ್ಥಿಯೋರ್ವ ಚಲಿಸುತ್ತಿರುವ ಬಸ್ಸಿನಿಂದ ಆಕಸ್ಮಿಕ ಬಿದ್ದು ಮೃತ ಪಟ್ಟ ಪ್ರಕರಣದಲ್ಲಿ ಚಾಲಕ, ನಿರ್ವಾಹಕರನ್ನು ಕೊಲೆಗೆ ಆಸ್ಪದ ನೀಡಬಲ್ಲ ಅಪರಾಧ ಸೆಕ್ಷನ್ 304 ಅಡಿ ಬಂಧಿಸಿ ಜೈಲಿಗೆ ಕಳುಹಿಸಿರುವುದನ್ನು ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘ ತೀವ್ರವಾಗಿ ಖಂಡಿಸಿದ್ದು, ಪೊಲೀಸ್ ಇಲಾಖೆಯ ನಡೆ ದ.ಕ. ಉಡುಪಿ ಜಿಲ್ಲೆಗಳ ಖಾಸಗಿ ಬಸ್ಸುಗಳಲ್ಲಿ ಯಾವುದೇ ಉದ್ಯೋಗ ಭದ್ರತೆ ಇಲ್ಲದೆ ದಿನಗೂಲಿಗೆ ದುಡಿಯುವ ಸಾವಿರಾರು ನೌಕರರಲ್ಲಿ ಆತಂಕ, ಭೀತಿ ಮೂಡಿಸಿದೆ ಎಂದು ತಿಳಿಸಿದೆ.

ಪೊಲೀಸ್ ಇಲಾಖೆಯ ನಡೆ ನಿಯಮ ಬಾಹಿರವಾಗಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಆಗಿರುವ ತಪ್ಪುಗಳನ್ನು ಗುರುತಿಸಿ ಸಂತ್ರಸ್ತ ಬಸ್ಸು ನೌಕರರಿಗೆ ನ್ಯಾಯ ಒದಗಿಬೇಕು ಎಂದು ಸಂಘ ಆಗ್ರಹಿಸಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಖಾಸಗಿ ಬಸ್ಸುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚಾಲಕರು, ನಿರ್ವಾಹಕರು ದುಡಿಯುತ್ತಿದ್ದಾರೆ. ಈಗಿರುವ ವ್ಯವಸ್ಥೆಯಲ್ಲಿ ಬಹುತೇಕರಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಇರುವುದಿಲ್ಲ.‌ ಅಂದಂದಿನ ದುಡಿಮೆಗೆ ದಿನಗೂಲಿ ಮಾತ್ರ ಇರುತ್ತದೆ. ಈ ರೀತಿ ದುಡಿದು ಕುಟುಂಬ ನಿರ್ವಹಣೆಗೆ ಪರದಾಡುವ ನೌಕರರನ್ನು ಕರ್ತವ್ಯ ನಿರ್ವಹಣೆ ಸಂದರ್ಭ ನಡೆದ ಆಕಸ್ಮಿಕ ಘಟನೆಗೆ ಸಂಬಂಧಿಸಿ ಅಪಘಾತ ಸೆಕ್ಷನ್ ಬದಲಿಗೆ “ಕೊಲೆಗೆ ಆಸ್ಪದ ನೀಡಬಲ್ಲ ಪ್ರಕರಣ” ಸೆಕ್ಷನ್ ದಾಖಲಿಸಿ ಬಂಧಿಸಿದರೆ ಅವರ ಬದುಕಿನ ಹಕ್ಕನ್ನೇ ಕಸಿದು ಕೊಂಡಂತಾಗುತ್ತದೆ. ಅವರ ಕುಟುಂಬ ಬೀದಿಗೆ ಬರುತ್ತದೆ. ಇಂತಹ ಭೀತಿಯ ನೆರಳಲ್ಲಿ ಕರ್ತವ್ಯ ನಿರ್ವಹಿಸುವುದು ಹೇಗೆ ಸಾಧ್ಯ ? ಎಂದು ನೌಕರರ ಸಂಘ ಪ್ರಶ್ನಿಸಿದೆ. ಅಷ್ಟಕ್ಕೂ ಘಟನೆ ನಡೆದಿರುವುದು ಆಕಸ್ಮಿಕವಾಗಿ. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ವಿದ್ಯಾರ್ಥಿ ಹೊರಗೆಸಯಲ್ಪಟ್ಟಿದ್ದಾರೆ. ಉಳಿದ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಘಟನೆ ನಡೆದಿದೆ, ಚಾಲಕ, ನಿರ್ವಾಹಕರಿಂದ ಯಾವುದೇ ರೀತಿಯ ಕರ್ತವ್ಯ ಚ್ಯುತಿ ನಡೆದಿರುವುದಿಲ್ಲ. ಹಾಗಿರುತ್ತಾ ಅಪಘಾತ ಸೆಕ್ಷನ್ ಬದಲಿಗೆ ಕೊಲೆಗೆ ಆಸ್ಪದ ನೀಡಬಲ್ಲ ಸೆಕ್ಷನ್ ದಾಖಲಿಸಲು ಪೊಲೀಸರಿಗೆ ಸಾಧ್ಯವಾಗುವುದು ಹೇಗೆ ? ಪೊಲೀಸರು ಸರ್ವಾಧಿಕಾರಿಗಳಂತೆ ಮನಸ್ಸಿಗೆ ತೋಚಿದಂತೆ ಸೆಕ್ಷನ್ ಹಾಕಲು ಇದೇನು ಪೊಲೀಸ್ ರಾಜ್ಯವೆ ? ಈ ಮೊದಲೇ ಪೊಲೀಸರ ಕಿರುಕಳದಿಂದ ಬಸ್ಸು ನೌಕರರು ಬೇಸತ್ತಿದ್ದಾರೆ. ಆತಂಕದಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಕರಣದ ನಂತರವಂತೂ ದಿನಗೂಲಿಯ ದುಡಿಮೆಗೆ ಬಂದು ಜೈಲು ಪಾಲಾಗುವ, ಕುಟುಂಬ ಬೀದಿಗೆ ಬರುವ ಭೀತಿಗೆ ಒಳಗಾಗಿದ್ದಾರೆ.

ಜಿಲ್ಲಾಡಳಿತ, ಜನಪ್ರತಿನಿಧಿಗಳು, ಬಸ್ಸು ಮಾಲಕರ ಸಂಘ ತಕ್ಷಣವೆ ಮಧ್ಯ ಪ್ರವೇಶಿಸಬೇಕು. ಹಾಕಿರುವ ಸೆಕ್ಷನ್ ಗಳನ್ನು ನಿಯಮ ಬದ್ದವಾಗಿ ಬದಲಾಯಿಸಿ ಸಂತ್ರಸ್ತ ಬಸ್ಸು ಚಾಲಕ, ನಿರ್ವಾಹಕರಿಗೆ ನ್ಯಾಯ ಒದಗಿಸಬೇಕು, ಇಲ್ಲದಿದ್ದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಉಸ್ಮಾನ್ ಕಾರ್ಯದರ್ಶಿ ಜಗದೀಶ್ ನಾಯ್ಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.