ಮಂಗಳೂರು ದಸರಾ ಮೆರವಣಿಗೆಗೆ ಕ್ಷಣಗಣನೆ

ಕರಾವಳಿಯೇ ಸಂಭ್ರಮ ಪಡುವ, ಜಗತ್ತಿನ ಕಣ್ಮನ ಸೆಳೆಯುವ ಅತ್ಯಾಕರ್ಷಕ ಹಾಗೂ ಲಕ್ಷಾಂತರ ಜನ ಸಮ್ಮಿಲನದ “ಮಂಗಳೂರು ದಸರಾ’ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ನೆಪದಿಂದ ಸಾಂಕೇತಿಕವಾಗಿ ಆಚರಣೆಯಾಗುತ್ತಿದ್ದ ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಮಂಗಳೂರು ದಸರಾ ನಡೆಯುತ್ತಿದೆ. ಕಳೆದ 9 ದಿನಗಳ ಕಾಲ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪ್ರತಿದಿನ ಪೂಜಾ ಕಾರ್ಯಕ್ರಮಗಳನ್ನು ಮಾಡಲಾಗಿತ್ತು. ಲಕ್ಷಾಂತರ ಜನರು ಶ್ರೀ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಆಕರ್ಷಕ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕುದ್ರೋಳಿ ಹಾಗೂ ಮಂಗಳೂರು ಜಗಮಗಿಸುತ್ತಿದೆ. ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಶ್ರೀ ದೇವಿಯನ್ನು ಅಂಬಾರಿಯ ಮೇಲೆ ಹೊತ್ತು ಮೆರವಣಿಗೆಯಿಂದ ಒಯ್ದರೆ, ಮಂಗಳೂರಿನ ದಸರಾದಲ್ಲಿ ಶಾರದಾಂಬೆಯ ಉತ್ಸವ ಮೂರ್ತಿಯೊಂದಿಗೆ ನವ ದುರ್ಗೆಯರು, ಗಣಪತಿ ವಿಗ್ರಹವನ್ನು ವಾಹನದ ಮೂಲಕ ಶೋಭಾಯಾತ್ರೆ ನಡೆಸಲಾಗುತ್ತದೆ. ವೈಭವದ ಮಂಗಳೂರು ದಸರಾಗೆ ಕ್ಷಣಗಣನೆ ಆರಂಭವಾಗಿದೆ.
