ಮಂಗಳೂರು : ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭ

ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭ ಮಂಗಳೂರಿನ ಲಾಲ್‌ಭಾಗ್‌ನ ಮಹಾನಗರ ಪಾಲಿಕೆ ಕಟ್ಟಡದಲ್ಲಿರುವ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕಚೇರಿ ಆವರಣದಲ್ಲಿ ನಡೆಯಿತು.

ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮತ್ತು ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭ ಜರುಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು, ಅಕಾಡೆಮಿಗಳು ರಾಜಕೀಯ ಸಂಸ್ಥೆ ಅಲ್ಲ. ಸಮಾಜ ಕಟ್ಟುವುದರೊಂದಿಗೆ ಭಾಷೆಯ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ನಾನಾ ಭಾಷಿಗರ ನಡುವೆ ಸೌಹಾರ್ದತೆ ಸಾಧಿಸುವುದು ಮುಖ್ಯ ಎಂದು ಹೇಳಿದರು.
ಕೊಂಕಣಿ ಅಕಾಡೆಮಿ ನೂತನ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಮಾತನಾಡಿ, ಮಂಗಳೂರಿನ ಉರ್ವಸ್ಟೋರ್ ಬಳಿ ಕೊಂಕಣಿ ಭವನದ ಕೆಲಸಗಳು ಸುಮಾರು 3 ಕೋ.ರೂ. ವೆಚ್ಚದಲ್ಲಿ ನಡೆದಿದ್ದು, ಇದೀಗ ಅರ್ಧಕ್ಕೆ ಸ್ಥಗಿತಗೊಂಡಿದೆ. ಕಟ್ಟಡವನ್ನು ಪೂರ್ಣಗೊಳಿಸಲು ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದರು.
ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಮಾತನಾಡಿ, ಅಕಾಡೆಮಿ ಅಧ್ಯಕ್ಷ ಸ್ಥಾನ ಎಂದು ಅದು ಅಧಿಕಾರ ಅಲ್ಲ. ಬದಲಾಗಿ ಜವಾಬ್ದಾರಿ. ಅದನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದರು.

ಈ ವೇಳೆ ಅಕಾಡೆಮಿ ಸದಸ್ಯರಾದ ಡಾ. ಪ್ರಶಾಂತ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೋ, ಸಮರ್ಥ ಭಟ್, ಸುನಿಲ್ ಸಿದ್ದಿ ಯಲ್ಲಾಪುರ, ಜೇಮ್ಸ್ ಲೋಪೇಸ್, ದಯಾನಂದ ಮಡ್ಕೇಕರ್ ಕಾರ್ಕಳ, ಪ್ರವೀಣ್ ಪಿಂಟೋ ಚಿಕ್ಕಮಗಳೂರು, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಸದಸ್ಯರಾದ ಎ.ಸಿ. ವಿನಯರಾಜ್, ಅನಿಲ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ, ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ. ವಂದಿಸಿದರು.
