ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-2022 : ವೈಜ್ಞಾನಿಕ ಪ್ರದರ್ಶನ ಹಾಗೂ ವಿವರಣೆಗಳ ಮೂಲಕ ಗಮನಸೆಳೆದ ಮಕ್ಕಳು

ಮಂಗಳೂರಿನ ಹೊರವಲಯದ ಅಡ್ಯಾರ್‌ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ರಾಜ್ಯಮಟ್ಟದ, ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-೨೦೨೨ ನಡೆಯಿತು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಪ್ರದರ್ಶನ ಹಾಗೂ ವಿವರಣೆಗಳ ಮೂಲಕ ಗಮನ ಸೆಳೆದರು.

 ಅಡುಗೆ ಅನಿಲ ಸಿಲಿಂಡರ್‌ನಿಂದ ಲೀಕೇಜ್ ಆಗಿ ಆಗುವ ಸಂಭಾವ್ಯ ಅನಾಹುತ ತಪ್ಪಿಸುವ ಸಾಧನ, ದೃಷ್ಟಿ ದೋಷ ಇರುವವರಿಗೆ ತಮ್ಮ ಹತ್ತಿರದ ವಸ್ತುಗಳ ಬಗ್ಗೆ ಮುನ್ಸೂಚನೆ ನೀಡುವ ಸೆನ್ಸಾರ್, ಒಂದು ತಿಂಗಳವರೆಗೂ ಕರೆಂಟ್ ಬಳಕೆಯಿಲ್ಲದೆ ತರಕಾರಿಯನ್ನು ಕೆಡದಂತೆ ಕಾಪಾಡುವ ಪ್ರಾಕೃತಿಕ ಸಾಧನ. ಇಂತಹ ಭಾವೀ ವಿಜ್ಞಾನಿಗಳ ಕೈಚಳಕ, ತಂತ್ರಜ್ಞಾನ ಹಾಗೂ ಬೌದ್ಧಿಕ ಜಾಣ್ಮೆ, ಕೌಶಲ್ಯದಿಂದ ಹೊರಹೊಮ್ಮಿದ ನೂರಾರು ಬಗೆಯ ವೈಜ್ಞಾನಿಕ ಸಾಧನಗಳು, ಸಲಕರಣೆಗಳ ಪ್ರದರ್ಶನಕ್ಕೆ ಅಡ್ಯಾರ್‌ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ವೇದಿಕೆ ಕಲ್ಪಿಸಿದೆ.

ಕೇವಲ ಇಟ್ಟಿಗೆಯನ್ನು ಪಿರಾಮಿಡ್ ಆಕಾರದಲ್ಲಿ ಜೋಡಿಸಿಕೊಂಡು ಕೂಲರ್ ರೀತಿಯಲ್ಲಿ ತರಕಾರಿ ಹಣ್ಣು ಹಂಪಲುಗಳನ್ನು ಸರಿ ಸುಮಾರು ಒಂದು ತಿಂಗಳ ಕಾಲ ಕೆಡದಂತೆ ರಕ್ಷಿಸುವ ಮಾದರಿಯನ್ನು ಮಾಣಿಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು.

ಅಡುಗೆ ಅನಿಲ ಸಿಲಿಂಡರ್‌ರೆಗ್ಯುಲೇಟರ್‌ಗೆ ಸೆನ್ಸಾರ್‌ವೊಂದನ್ನು ಅಲವಡಿಸಿ ಗ್ಯಾಸ್ ಲೀಕ್ ಆಗಿ ಆಗುವ ಅನಾಹುತವನ್ನು ತಡೆಯುವುದು ಮಾತ್ರವಲ್ಲದೆ, ಸೆನ್ಸಾರ್ ಮೂಲಕ ಗ್ಯಾಸ್ ಲೀಕ್‌ಸೂಚನೆಯನ್ನು ನೀಡುವ ತನ್ನ ಸ್ನೇಹಿತನ ಜತೆ ಸೇರಿಕೊಂಡು ತಯಾರಿಸಿರುವ ಸಾಧನದ ಬಗ್ಗೆ ಸರಕಾರಿ ಹೈಸ್ಕೂಲೊಂದರ ವಿದ್ಯಾರ್ಥಿ ಚಿನ್ಮಯ್ ವಿವರಿಸಿದರು.

ಅಡಿಕೆಯನ್ನು ಗಾತ್ರದ ಆಧಾರದಲ್ಲಿ ಬೇರ್ಪಡಿಸುವ ಸಾಧನ, ಅಪಘಾತ ಪತ್ತೆಹಚ್ಚುವ ವಿಧಾನ, ಕಲುಷಿತ ನೀರನ್ನು ಸ್ವಚ್ಛಗೊಳಿಸುವುದು, ಡ್ರೋನ್ ಪೇಯ್ಟಂರ್, ಬೈಕ್‌ಗಳಿಗೆ ಏರ್‌ಬ್ಯಾಗ್, ಜೈವಿಕ ಸೋಪ್ ಪೌಡರ್, ಅಕ್ಕಿ ಹಾಗೂ ಆಹಾರ ಕಾಳುಗಳನ್ನು ಹುಳ ಹುಪ್ಪಡಿಗಳಿಂದ ಸಂರಕ್ಷಿಸುವ ವಿಧಾನ, ಬಹುಪಯೋಗಿ ಕೃಷಿ ಯಂತ್ರಗಳು, ಸ್ಮಾರ್ಟ್ ರೈಲ್ವೇ ವಿಧಾನ, ಬ್ಲೈಂಡ್ ಸ್ಟಿಕ್, ರೈತರ ಸುರಕ್ಷತೆಗಾಗಿ ಶೂ, ಚಂದ್ರನ ಬೆಳಕನ್ನು ಉಪಯೋಗಿಸಿ ದಾರಿ ದೀಪ ಸೇರಿದಂತೆ ನೂರಕ್ಕೂ ಅಧಿಕ ಪ್ರಾಜೆಕ್ಟ್‌ಗಳು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟಿದ್ದವು.

ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಿಂದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಿ ಅಂತಿಮ ಹಂತಕ್ಕೆ ೨೦೦ಕ್ಕೂ ಅಧಿಕ ಮಾದರಿಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಕಳೆದ ಎರಡು ದಿನಗಳಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರದರ್ಶಿಸಲ್ಪಟ್ಟ ಮಾದರಿಗಳಿಗೆ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಲಹೆ- ಸೂಚನೆಗಳಂತೆ ಮಾದರಿಯಲ್ಲಿ ಬದಲಾವಣೆ ಮಾಡಿ, ಅಂತಿಮ ಸುತ್ತಿನ ಪ್ರದರ್ಶನ ಇಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಟಿಯು ರಿಜಿಸ್ಟ್ರಾರ್ ಡಾ.ಬಿ.ಇ.ರಂಗಸ್ವಾಮಿ ನೆರವೇರಿಸಿದರು.

ನೀತಿ ಆಯೋಗದ ಪೃಥ್ವಿ ಸಾಯಿ ಪೆನುಮಾಡು, ಎನ್‌ಪವರ್ ಸಂಸ್ಥಾಪಕ ಮತ್ತು ಸಿಇಒ ಸುಶೀಲ್ ಮುಂಗೇಕರ್, ಬಿಯಾಂಡ್ ಬೆಂಗಳೂರು ಕಾರ್ಯಕ್ರಮ ನಿರ್ವಾಹಕ ಮುಕೇಶ್ ಎಸ್., ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ರಾಜೇಶ ಎಸ್., ನಿರ್ದೇಶಕ (ರಿಸರ್ಚ್)ರಾದ ಮಂಜಪ್ಪ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ನಾಗೇಶ್ ಎಚ್.ಆರ್., ಕಾರ್ಯಕ್ರಮ ಸಂಯೋಜಕಿ ಪ್ರಣಮ್ಯಾ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.