ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಲೇ ಅಕ್ರಮ ಮರಳು ಸಾಗಾಟ : ದಕ್ಷಿಣ ಕನ್ನಡ ಸಿವಿಲ್ ಗುತ್ತಿಗೆದಾರರ ಸಂಘ ಆರೋಪ

ರಾತ್ರಿ ಹೊತ್ತಿನಲ್ಲೇ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಕೃಪಾಕಟಾಕ್ಷದಿಂದಲೇ ಅಕ್ರಮ ಮರಳು ಸಾಗಾಟದ ದಂಧೆ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಸಿವಿಲ್ ಗುತ್ತಿಗೆದಾರರ ಸಂಘ ಆರೋಪಿಸಿದೆ.ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ದಿನಾಕರ್ ಸುವರ್ಣ ಅವರು, ರಾತ್ರಿ ಹೊತ್ತಿನಲ್ಲಿ ಅಧಿಕಾರಿಗಳ ಹೊಂದಾಣಿಕೆಯಿಂದ, ಮರಳು ಸಿಗುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಯಾವ ಲಾರಿಗಳನ್ನು ವಶಕ್ಕೆ ಪಡೆಯಬಾರದೆಂದು ಸೂಚನೆ ಇದೆ. ಹಗಲು ಹೊತ್ತಿನಲ್ಲಿ ಮರಳು ಸಾಗಾಟ ಮಾಡಿದ್ರೆ, ಕೆಲವರು ಪ್ರಶ್ನೆ ಮಾಡುತ್ತಾರೆ. ರಾತ್ರಿ ಹೊತ್ತಿನಲ್ಲೇ ಅಕ್ರಮ ಮರಳು ಸಾಗಾಟ ಆಗುತ್ತದೆ. ಮೊದಲು ವೃತ್ತಿಯಾಗಿತ್ತು, ಇದೀಗ ಕಳ್ಳದಂಧೆ ಮಾರ್ಪಟ್ಟಿದೆ. ಗಣಿ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದರು.

ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಮಾತನಾಡಿ, ಕಳೆದ 2 ವಾರಗಳಿಂದ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸುವ ಕ್ರಷರ್ ಜಲ್ಲಿಯ ಪೂರೈಕೆಯು ಸ್ಥಗಿತಗೊಂಡಿದ್ದು, ಜಲ್ಲಿಯ ಲಭ್ಯತೆಯಿಲ್ಲದೆ ಕಾರಣ ಗುತ್ತಿಗೆದಾರರು ಕಟ್ಟಡ ಕಾಮಗಾರಿಗಳನ್ನು ನಡೆಸಲಾಗದಿರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾರದ ಪರಿಸ್ಥಿತಿ ತಲೆದೋರಿದೆ ಎಂದು ದೂರಿದರು. ನಿರ್ಮಾಣ ಕಾಮಗಾರಿಗಳಿಗೆ ಕ್ರಷರ್ ಜಲ್ಲಿಯನ್ನು ಪೂರೈಸುವ ಪೂರೈಕೆದಾರರು, ಸರ್ಕಾರದ ನೀತಿ ನಿಯಮಾವಳಿ ಮತ್ತು ಧೋರಣೆಯಿಂದ ಅವರಿಗೆ ಕ್ರಷರ್ ನಡೆಸಲು ತೊಂದರೆ ಆಗುತ್ತಿದೆ. ಜಿಲ್ಲೆಯಾದ್ಯಂತ ಅನೇಕ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ರಾಜ್ಯದ ಮಾತ್ರವಲ್ಲದೆ, ಹೊರ ರಾಜ್ಯಗಳ ಲಕ್ಷಾಂತರ ಮಂದಿ ಕೂಲಿ ಕಾರ್ಮಿಕರು ದುಡಿಯುತ್ತಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದೀಗ ಎರಡು ವಾರಗಳಿಂದ ಜಲ್ಲಿಯ ಪೂರೈಕೆ ಸ್ಥಗಿತಗೊಂಡು ನಿರ್ಮಾಣ ಕಾಮಗಾರಿಗಳು ಅರ್ಧದಲ್ಲಿ ನಿಂತು ಹೋಗಿದೆ. ಹೀಗಾಗಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವ ಸಂಭವಿದೆ. ಈ ಸಮಸ್ಯೆಯನ್ನು ಶೀಘ್ರ ಪರಿಹಾರ ಕಾಣದಿದ್ದರೆ, ಕಾರ್ಮಿಕರನ್ನೊಗೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್ ಕುಮಾರ್ ಜೋಗಿ, ಕಾರ್ಯದರ್ಶಿ ದೇವಾನಂದ, ಟ್ರಸ್ಟಿ ಸುರೇಶ್ ಉಪಸ್ಥಿತರಿದ್ದರು.
