ಮಂಗಳೂರು: ಶಿರೂರು ದುರಂತ – ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.
ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯ್ಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.
ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, “ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ“ ಎಂದು ಬೆನ್ನುತಟ್ಟಿದರು.
ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಅಧ್ಯಕ್ಷ ವಸಂತ್ ಎನ್. ಕೊಣಾಜೆ, ಗಣೇಶ್ ತಲಪಾಡಿ ಉಪಸ್ಥಿತರಿದ್ದರು.

add - Rai's spices

Related Posts

Leave a Reply

Your email address will not be published.