ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಗ್ಯಾರಂಟಿಯಿಂದ ವಂಚಿಸಬೇಡಿ : ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಂದಿಗೆ ಗ್ಯಾರಂಟಿ ಯೋಜನೆ ಕೊಡಬಾರದು ಎಂದು ಕಾಂಗ್ರೆಸ್ಸಿಗರು ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಕೇವಲ ಗೆಲ್ಲಿಸಿದ ಕ್ಷೇತ್ರಗಳಿಗೆ ಮಾತ್ರ ಗ್ಯಾರಂಟಿ ಕೊಡುವ ಕಾಂಗ್ರೆಸ್ ಮನಸ್ಥಿತಿ ಸರಿಯಲ್ಲ. ದ.ಕ.ಮತ್ತು ಉಡುಪಿ ಜಿಲ್ಲೆಯ ಜನತೆಯನ್ನು ಗ್ಯಾರಂಟಿ ಯೋಜನೆಯಿಂದ ವಂಚಿಸಬೇಡಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಬಂದ 24 ಗಂಟೆಯಲ್ಲೇ ಗ್ಯಾರಂಟಿ ಜಾರಿ ಎಂದು ಘೋಷಿಸಿದ್ದ ಕಾಂಗ್ರೆಸ್ ಈಗ ಭರವಸೆಗಳನ್ನು ಈಡೇರಿಸಲು ಪರದಾಡುತ್ತಿದೆ. ಎಲ್ಲಾ ಗ್ಯಾರೆಂಟಿಗಳನ್ನು ಯಾವುದೇ ಶರತ್ತುಗಳು ಇಲ್ಲದೆ ಎಲ್ಲಾ ಜಿಲ್ಲೆಗಳಲ್ಲಿಯೂ ತಕ್ಷಣದಿಂದ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ದ್ವೇಷದ ರಾಜಕಾರಣ ಆರಂಭವಾಗಿದೆ. ಶಾಸಕರಾದ ಡಾ.ಅಶ್ವತ್ಥ ನಾರಾಯಣ ಮತ್ತು ಹರೀಶ್ ಪೂಂಜಾ ಅವರ ಮೇಲೆ ಕೇಸು ದಾಖಲಿಸುವ ಕೆಲಸ ಆಗಿದೆ. ಅಲ್ಲಲ್ಲಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿದೆ. ಈ ಎಲ್ಲಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೇದವ್ಯಾಸ ಕಾಮತ್ ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದೆ. ಆದರೆ ಈಗಾಗಲೇ ಕೇಂದ್ರ ಸರಕಾರದಿಂದ 5 ಕೆಜಿ ಅಕ್ಕಿ ಪಡಿತರ ಮೂಲಕ ವಿತರಣೆಯಾಗುತ್ತಿದೆ. ಕಾಂಗ್ರೆಸ್ ಘೋಷಿಸಿದಂತೆ ಕೇಂದ್ರದ ಪಾಲಿನ 5 ಕೆಜಿ ಅಕ್ಕಿ ಹೊರತುಪಡಿಸಿ ರಾಜ್ಯ ಸರಕಾರದಿಂದಲೇ ತಲಾ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಬಿಡುಗಡೆಯಾದ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಅನುದಾನವನ್ನು ತಡೆಹಿಡಿಯುವ ಮೂಲಕ ರಾಜಕೀಯ ಹಗೆತನ ಸಾಧಿಸಿ ಅಭಿವೃದ್ಧಿ ವಿರೋಧಿ ನಡೆಯನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ.
ಇದು ಸರಿಯಲ್ಲ. ಪ್ರಕೃತಿ ವಿಕೋಪದಿಂದ ಜನರು ತೊಂದರೆ ಅನುಭವಿಸುತ್ತಿದ್ದರೂ ಈ ಬಗ್ಗೆ ಸಕಾಲಿಕ ಕ್ರಮ ಕೈಗೊಳ್ಳದ ಕಾಂಗ್ರೇಸ್ ಸರಕಾರ ಮಂತ್ರಿ ಮಂಡಲ ರಚನೆಯಲ್ಲೇ ಕಾಲ ಕಳೆಯುತ್ತಿದೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಪೂರ್ಣಿಮಾ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು