ಲೇಡಿಗೋಶನ್ ಆಸ್ಪತ್ರೆಯಲ್ಲಿ ‘ಆಟಿ – ಆಹಾರ-ಆರೋಗ್ಯ-ಉತ್ಸವ’

ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇಲ್ಲಿ ಆಟಿ-ಆಹಾರ–ಆರೋಗ್ಯ ಎನ್ನುವ ಶಿರೋನಾಮೆಯಡಿಯಲ್ಲಿ ವಿನೂತನವಾದ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಆಟಿ ತಿಂಗಳಲ್ಲಿ ಪೌಷ್ಟಿಕ ಆಹಾರದ ಅಗತ್ಯತೆಯ ಬಗ್ಗೆ ಬೆಳಕನ್ನು ಚೆಲ್ಲುತ್ತಾ ಗರ್ಭಿಣಿ ಮಹಿಳೆಯರ ಮತ್ತು ಗರ್ಭಸ್ಥ ಶಿಶುವಿನ ಮೇಲಣ ಪರಿಣಾಮವನ್ನು ಮನಮುಟ್ಟಿಸುವ ರೀತಿಯ ಸಾರ್ವಜನಿಕ ಸದುದ್ದೇಶದ ಪ್ರಯತ್ನ ಇದಾಗಿತ್ತು. ಆಟಿ ತಿಂಗಳ ಹಾಗೂ ತುಳುನಾಡಿನ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಕಲ್ಪವೃಕ್ಷಕ್ಕೆ ನೀರೆರುವ ಮೂಲಕ ವಿಭಿನ್ನವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಮಾತನ್ನಾಡಿದ ಶ್ರೀ ಸುರೇಶ್ ಮಂಗಲ್ಪಾಡಿ ಇವರು ಆಟಿ ತಿಂಗಳಿಗೆ ಪೂರಕವಾದ ಆರೋಗ್ಯ ಪದ್ಧತಿ ಹಾಗೂ ಜೀವನ ಶೈಲಿಯ ಬಗ್ಗೆ ಬೆಳಕು ಚೆಲ್ಲಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ವೈದ್ಯಕೀಯ ಅಧೀಕ್ಷಕ ಡಾ/ದುರ್ಗಾಪ್ರಸಾದ್. ಎಂ. ಆರ್. ಇವರು ಇಂಥಹ ಕಾರ್ಯಕ್ರಮಗಳು ಪೌಷ್ಟಿಕ ಆಹಾರ, ಆರೋಗ್ಯ, ಸಾಂಪ್ರದಾಯಿಕ ಜೀವನ ಶೈಲಿಯ ಬಗ್ಗೆ ಮಾರ್ಗದರ್ಶನವನ್ನು ನೀಡುವುದರ ಜೊತೆಯಲ್ಲಿ ಸಹಬಾಳ್ವೆ ಹಾಗೂ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಸಾರ್ವಕಾಲಿಕ ಸತ್ಯವನ್ನು ಸಿಬ್ಬಂದಿಗಳಲ್ಲಿ ಮೂಡಿಸಲು ಸಹಕಾರಿ ಎಂದರು. ‘ಗರ್ಭಿಣಿ ಮತ್ತು ಆಹಾರ’ ಎಂಬ ವಿಷಯನ್ನಾಧರಿಸಿ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಹೇಮಲತಾ ಉಪನ್ಯಾಸವನ್ನಿತ್ತರು. ಶ್ರೀಮತಿ ದಿಶಾ ಹಾಗೂ ಶ್ರೀಮತಿ ರಜನಿ ಸಾಂಪ್ರದಾಯಿಕ ಹಾಡುಗಳನ್ನಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದರು.

ಲೇಡಿಗೋಶನ್ ಸಿಬ್ಬಂದಿಗಳಾದ ಪ್ರಶಾಂತ್ ಹಾಗೂ ಸೋಮನಾಥ ಅವರ ವಾದ್ಯಗೋಷ್ಟಿ, ಸ್ಯಾಕ್ಸೋಫೋನ್, ಕೊಂಬು ಕಹಳೆಗಳ ಮಾಧುರ್ಯ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದವು. ಸಿಬ್ಬಂದಿ ಶ್ರೀ ಪ್ರವೀಣ್ ಅವರ ಸುಪುತ್ರ ಮಾಸ್ಟರ್ ಪ್ರತ್ವಿನ್ ‘ಆಟಿ ಕಳಂಜ ಮತ್ತು ಆರೋಗ್ಯ’ ಪ್ರಾತ್ಯಕ್ಷಿಕೆಯನ್ನು ಸೊಗಸಾಗಿ ಪ್ರಸ್ತುತ ಪಡಿಸಿದರು. ಶುಶ್ರೂಷಾಧಿಕಾರಿ ಶ್ರೀಮತಿ ಲವಿನಾ ಮತ್ತು ಶ್ರೀಮತಿ ದಿವ್ಯಲತಾ ಇವರು ಗರ್ಭಿಣಿ- ಆಹಾರ – ಆರೋಗ್ಯ ಮತ್ತು ಗುಣಮಟ್ಟದ ಹೆರಿಗೆ ಸೇವೆಗಳ ಬಗ್ಗೆ ಕವನವಾಚನದ ಮೂಲಕ ಸಾರ್ವಜನಿಕ ಸಂದೇಶವನ್ನು ಸಾರಿದರು. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಗಳು ಸ್ವಪ್ರೇರಣೆಯಿಂದ ತಯಾರಿಸಿದ ಮೂವತ್ತೊಂಭತ್ತು ಆಟಿ ವಿಶೇಷ ವಿವಿಧ ಖಾದ್ಯಗಳ ಪ್ರಾತ್ಯಕ್ಷಿಕೆ ಮತ್ತು ಸಿಬ್ಬಂದಿಗಳ ಸಹಭೋಜನ ಎಲ್ಲರ ಕಣ್ಮನ ಸೆಳೆಯಿತು.

ನಿವಾಸಿ ವೈದ್ಯಾಧಿಕಾರಿ ಡಾ/ಬಾಲಕೃಷ್ಣ ರಾವ್, ಶುಶ್ರೂಷಾಧೀಕ್ಷಕಿ ಶ್ರೀಮತಿ ತ್ರೇಸಿಯಮ್ಮ, ನರ್ಸಿಂಗ್ ಸುಪರ್ ವೈಸರ್ ಅನಸೂಯ ಉಪಸ್ಥಿತರಿದ್ದರು. ಹೇಮಂತ್ ಪ್ರಸ್ತಾಪಿಸಿ, ಶ್ರೀಮತಿ ಅಂಬಿಕಾ ಮತ್ತು ಜಿತೇಶ್ ಸ್ವಾಗತಿಸಿದರು. ಶ್ರೀಮತಿ ಸುಮಂಗಲಾ ಮತ್ತು ಜಯಲಕ್ಷ್ಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಡಯಾನಾ ವಂದನಾರ್ಪಣೆಗೈದರು.

Related Posts

Leave a Reply

Your email address will not be published.