ಅಕ್ಕಿ ಗೋದಾಮಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ…
ಮಂಗಳೂರು : ಹಳೇಬಂದರು ಸಗಟು ಮಾರುಕಟ್ಟೆಯ ಪೋರ್ಟ್ ರಸ್ತೆಯ ಮಧ್ಯೆ ಹಾದು ಹೋಗಿ ನದಿ ಸೇರುವ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಬಂದರು ಇಲಾಖೆ ಕಟ್ಟಡ ನಿರ್ಮಾಣ ಮಾಡಿ ರಾಜ ಕಾಲುವೆಯನ್ನು ತಿರುಗಿಸಿರುವುದರಿಂದ ರಾಜ ಕಾಲುವೆಯಲ್ಲಿ ಹರಿದು ಹೋಗುವ ತ್ಯಾಜ್ಯ ನೀರು ಉಕ್ಕಿ ಹೊರಗೆ ಗೋದಾಮುಗಳಿಗೆ ನುಗ್ಗಿ ಅಕ್ಕಿ ಧಾನ್ಯ, ಮೆಣಸು ಇತ್ಯಾದಿ ಸರಕುಗಳು ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಅಲ್ಲದೆ ಕೊಳಚೆ ನೀರು ರಸ್ತೆಯಲ್ಲೇ ನಿಂತು ಪರಿಸರದಲ್ಲಿ ದುರ್ನಾತ ಬೀರುತ್ತಿದೆ. ಇಲ್ಲಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರು ಡೆಂಗ್ಯೂ, ಮಲೇರಿಯಾ ಮತ್ತು ಚರ್ಮ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಈ ಬಗ್ಗೆ ಬಂದರು ಇಲಾಖೆಯ ಗಮನಕ್ಕೆ ಹಲವು ಬಾರಿ ತರಲಾಗಿದ್ದರೂ ಯಾವುದೇ ಕ್ರಮಗಳು ಕೈಗೊಂಡಿರುವುದಿಲ್ಲ. ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಕೂಡಾ ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಬಂದರು ಅಧಿಕಾರಿಗಳಿಗೆ ರಾಜ ಕಾಲುವೆ ತೆರವುಗೊಳಿಸಲು ಸೂಚನೆ ಕೊಟ್ಟರೂ ನಿರ್ಲಕ್ಷ್ಯ ಮಾಡಾಲಾಗಿದೆ. ಇದರಿಂದಾಗಿ ಸ್ಮಾರ್ಟ್ ಸಿಟಿ ಕಾಮಗರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಹಳೇಬಂದರು ಸಗಟು ಮಾರುಕಟ್ಟೆಯ ವರ್ತಕರು,ಕಾರ್ಮಿಕರ ಪ್ರತಿನಿಧಿಗಳನ್ನೊಳಗೊಂಡ ನಿಯೋಗವು ಬಂದರು ಇಲಾಖೆಯ ಮಂಗಳೂರು ವಿಭಾಗ ಪ್ರಬಂಧಕರನ್ನು ಭೇಟಿ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಮನವಿ ನೀಡಲಾಯಿತು ಮತ್ತೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಬಂದರು ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು. ನಿಯೋಗದಲ್ಲಿ ಶಂಸುದ್ದಿನ್ ಬಂದರ್, ವರ್ತಕರ ಪ್ರತಿನಿಧಿಗಳಾದ ಪ್ರಕಾಶ್ ಕಾಮತ್, ಆದಿಲ್ ಎಂಸಿಎಂ, ರಜಾಕ್ ಉಚ್ಚಿಲ್, ಕಾರ್ಮಿಕರ ಪ್ರತಿನಿಧಿಗಳಾದ ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್, ಸಿದ್ದಿಕ್ ಬೆಂಗರೆ, ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದರು.