ಸರಕಾರಿ ಲೇಡಿಗೋಶನ್ ಆಸ್ಪತ್ರೆ : ಕಾನೂನು ಅರಿವು ಮಾಹಿತಿ ಕಾರ್ಯಾಗಾರ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಮತ್ತು ಸಖಿ ಒನ್ ಸ್ಟಾಪ್ ಸೆಂಟರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತ್ರಸ್ತ ಪರಿಹಾರ ಕಾರ್ಯಕ್ರಮ ಮತ್ತು ಕಾನೂನು ಅರಿವು ಕಾರ್ಯಾಗಾರ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಬಿ. ಜಿ. ಇವರು ಮಾತನಾಡುತ್ತಾ ಪ್ರತಿಯೊಬ್ಬ ಮಹಿಳೆ ತನಗೆ ಭಾರತದ ಸಂವಿಧಾನ ಕಲ್ಪಿಸಿಕೊಟ್ಟ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವನ್ನು ಮೂಡಿಸಿಕೊಂಡು ಸಬಲತೆಯತ್ತ ಪಯಣಿಸುತ್ತಾ ಜೀವನ್ಮುಖಿಗಳಾಗಬೇಕೆಂದರು.
ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ಗೌರಿಯವರು ಸಂತ್ರಸ್ತ ಮಹಿಳೆಯರಿಗೆ ಸರಕಾರದ ವತಿಯಿಂದ ದೊರೆಯುವ ಪರಿಹಾರಗಳ ಬಗ್ಗೆ ಸಮಗ್ರ ಮಾಹಿತಿಯನ್ನಿತ್ತರು. ಅಧ್ಯಕ್ಷತೆಯನ್ನು ವಹಿಸಿದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ/ದುರ್ಗಾಪ್ರಸಾದ್. ಎಂ. ಆರ್. ಇವರು ಸ್ವರಚಿತ ಕವನವನ್ನು ವಾಚಿಸುತ್ತಾ ಸ್ತ್ರೀ ಶೋಷಣೆ ಮುಕ್ತ ಸಮಾಜ ಈ ದೇಶಕ್ಕೆ ನಾವೆಲ್ಲರೂ ನೀಡಬಹುದಾದ ಅತಿ ವಿಶಿಷ್ಟ ಕೊಡುಗೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀ. ಪಾಪ ಬೋವಿ, ನಿವಾಸಿ ವೈದ್ಯಾಧಿಕಾರಿಗಳಾದ ಡಾ/ಬಾಲಕೃಷ್ಣ ರಾವ್, ಶುಶ್ರೂಷಾಧೀಕ್ಷಕಿ ಶ್ರೀಮತಿ ತ್ರೇಸಿಯಮ್ಮ, ಶ್ರೀಮತಿ ಅನಸೂಯ ಉಪಸ್ಥಿತರಿದ್ದರು.
