ಮಂಗಳೂರು: ಸಿಸಿಬಿ ಕಾರ್ಯಾಚರಣೆ- ಅಕ್ರಮ ಪಿಸ್ತೂಲ್ ಹೊಂದಿದ ಇಬ್ಬರ ಸೆರೆ

ಅಕ್ರಮವಾಗಿ ಪಿಸ್ತೂಲ್ ವಶದಲ್ಲಿರಿಸಿಕೊಂಡು ಕಾರಿನಲ್ಲಿ ಕುಳಿತು ಯಾವುದೋ ದುಷ್ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ‌

ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಿಸ್ತೂಲ್ ಅನ್ನು ವಶದಲ್ಲಿರಿಸಿ ಯಾವುದೋ ದುಷ್ಕೃತ್ಯಕ್ಕೆ ಸಂಚು ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೊರತ್ತಣೆ ನಿವಾಸಿ ಮೊಹಮ್ಮದ್ ಅಸ್ಕರ್(26) ಮತ್ತು ಮಂಜೇಶ್ವರ ಬೆಜ್ಹ ಮೂಡಂಬೈಲು ನಿವಾಸಿ ಅಬ್ದುಲ್ ನಿಸಾರ್ (29) ಬಂಧಿತ ಆರೋಪಿಗಳು. ಇವರನ್ನು ವಶಕ್ಕೆ ಪಡೆದು ಪಿಸ್ತೂಲ್-1, ಸಜೀವ ಮದ್ದುಗುಂಡು -2, ಮೊಬೈಲ್ ಫೋನು -2 ಹಾಗೂ ಕಪ್ಪು ಬಣ್ಣದ ಹುಂಡೈ ವೆರ್ನಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸೊತ್ತಿನ ಒಟ್ಟು ಮೌಲ್ಯ ರೂ. 7,15,000/- ಆಗಬಹುದು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯ ಪೈಕಿ ಮೊಹಮ್ಮದ್ ಅಸ್ಗರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಅಪಹರಣ, ಹಲ್ಲೆ ಪ್ರಕರಣ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟದ ಪ್ರಕರಣ ಹೀಗೆ ಒಟ್ಟು 8 ಪ್ರಕರಣ ದಾಖಲಾಗಿರುತ್ತದೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ, ಪಿಎಸ್ಐಗಳಾದ ಸುದೀಪ್ ಎಂ.ವಿ ಮತ್ತು ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

Related Posts

Leave a Reply

Your email address will not be published.