ಮಂಗಳೂರು : ಮಿಲಾಗ್ರಿಸ್ ನೂತನ ನರ್ಸಿಂಗ್ ಕಾಲೇಜ್ ಹಾಗೂ ಆವಿಷ್ಕಾರ-2024 ಸಾಂಸ್ಕೃತಿಕ ಹಬ್ಬದ ಉದ್ಘಾಟನೆ
ಮಂಗಳೂರು ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ನೂತನ ನರ್ಸಿಂಗ್ ಕಾಲೇಜ್ ಹಾಗೂ ಕಾಲೇಜಿನ ಆವರಣದಲ್ಲಿ ’ಅವಿಷ್ಕಾರ್ ೨೦೨೪’ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಸಮಗ್ರ ಆರೋಗ್ಯ ವಿಜ್ಞಾನ ವಿಭಾಗದ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾದ ಪ್ರೊಫೆಸರ್ ಯು . ಟಿ ಇಫ್ತಿಕಾರ್ ಫರೀದ್ ಮಾತನಾಡಿ, ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ಒಂದು ಮಹತ್ತರ ಕಾರ್ಯವನ್ನು ಕೈಗೊಂಡಿದೆ. ನರ್ಸಿಂಗ್ ಒಂದು ಉದಾತ್ತ ವೃತ್ತಿಯಾಗಿದ್ದು ಉದ್ಯೋಗ ರಂಗದಲ್ಲಿ ಅತ್ಯಂತ ಬೇಡಿಕೆಯ ಕ್ಷೇತ್ರವೂ ಆಗಿದೆ. ನರ್ಸಿಂಗ್ ಕೇವಲ ಒಂದು ಉದ್ಯೋಗವಲ್ಲ, ಇದು ಸಮಾಜದಲ್ಲಿ ಸೇವೆ ಸಲ್ಲಿಸಲು ಮತ್ತು ಅಗತ್ಯವಿರುವ ಸಮಯದಲ್ಲಿ ರೋಗಿಗಳಿಗೆ ಕಾಳಜಿಯನ್ನು ತೋರಿಸುವ ಕ್ಷೇತ್ರವಾಗಿದ್ದು ಮಾನಸಿಕವಾಗಿ ಕುಗ್ಗಿದ ಜೀವಗಳಿಗೆ ಧೈರ್ಯ ನೀಡಿ ಅವರ ಕುಟುಂಬಗಳ ಜೀವನದಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭ ಕೋರಿ ಸಮಾಜದಲ್ಲಿ ಅತ್ಯಂತ ಗೌರವಯುತವಾದ ಹುದ್ದೆ ನರ್ಸಿಂಗ್. ದೈಹಿಕವಾಗಿ ನೊಂದಿರುವ ಮನಸ್ಸುಗಳಿಗೆ ನಗುಮುಖದಿಂದ ಸೇವೆಗೈದು ಆರೋಗ್ಯಯುತರನ್ನಾಗಿಸುವ ಮಹಾನ್ಕಾರ್ಯ. ಅಂತಹ ಒಂದು ಸಾಮಾಜಿ ಕಕಳಕಳಿಯನ್ನು ಇಟ್ಟುಕೊಂಡು ಮಿಲಾಗ್ರಿಸ್ ನರ್ಸಿಂಗ್ ಕಾಲೇಜು ಆರಂಭಿಸಿದೆ ಎಂದರು.
ಕಾರ್ಯಕ್ರಮದಲ್ಲಿ ರೆ.ಫಾ ಫವೊಸ್ಟಿನ್, ಅಜಿತ್ ಲೋಬೋ, ಮ್ಯಾಕ್ಸಿಮ್ ಮೊಂತೆರೋ, ಡಾ. ಜಿವಿತಾ ಎಂ ಡಿ, ಡಾ. ಸುಜಯ್, ಸಿಎ ನಿತಿನ್ ಜೆ ಶೆಟ್ಟಿ, ಸಿಲ್ವೇಸ್ಟರ್ ಮಸ್ಕರೇನಸ್, ಜೆಸಿಂತಾ ಫರ್ನಾಂಡಿಸ್, ಸಂಗೀತ ಫೆರ್ನಾಂಡಿಸ್, ಡಾ. ವೀಣಾ ಜಿ ತಾವ್ರೋ, ಡಾ. ಡಯಾನಾ ಲೋಬೋ, ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಉಡುಗೆ ತೊಡುಗೆಗಳ ಪ್ರದರ್ಶನ ೩ರಿಂದ ೫ ವರ್ಷ ವಯಸ್ಸಿನ ಪುಟಾಣಿಗಳಿಗಾಗಿ ಬೇಬಿ ಶೋ,ಹೌಸಿ ಹೌಸಿ, ಕಿಸ್ಮಸ್ ಸ್ಟಾರ್, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು . ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶೇಷ ಆಕರ್ಷಕ ಬಹುಮಾನವನ್ನು ನೀಡಲಾಯಿತು. ಸಾಂಸ್ಕೃತಿಕ ಹಬ್ಬ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಸಲಾಯಿತು.
ಮಿಲಾಗ್ರಿಸ್ ಸಂಚಾಲಕರಾದ ರೆ| ಫಾ| ಬೊನವೆಂಚರ್ ನಝರತ್ ಸ್ವಾಗತಿಸಿದರು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಡಾ. ಮೈಕಲ್ ಸಾಂತುಮಾಯೋರ್ ವಂದಿಸಿದರು. ಉಪನ್ಯಾಸಕಿ ಶ್ರಾವ್ಯ ಎನ್ ಕಾರ್ಯಕ್ರಮ ನಿರೂಪಿಸಿದರು.