ಮಂಗಳೂರು: ಹೊಸಬೆಟ್ಟುವಿನಲ್ಲಿ ಸಮುದ್ರಕ್ಕಿಳಿದ ನಾಲ್ವರಲ್ಲಿ ಓರ್ವನ ರಕ್ಷಣೆ: ಮೂವರ ಮೃತದೇಹ ಪತ್ತೆ
ಮಂಗಳೂರಿಗೆ ಪ್ರವಾಸಕ್ಕೆಂದು ಬಂದ ನಾಲ್ವರು ಸ್ನೇಹಿತರು ಹೊಸಬೆಟ್ಟು ಬೀಚ್‌ನ ನಿರ್ಮಾಣ ಹಂತದ ಜೆಟ್ಟಿ ಬಳಿ ಸಮುದ್ರದಲ್ಲಿ ಈಜಲೆಂದು ಇಳಿದಿದ್ದು ಈ ಸಂದರ್ಭದಲ್ಲಿ ನಾಲ್ವರಲ್ಲಿ ಮೂವರು ಸಮುದ್ರ ಪಾಲಾಗಿದ್ದು, ಓರ್ವ ಯುವಕನನ್ನು ರಕ್ಷಣೆ ಮಾಡಲಾಗಿದೆ.
ಕಾಲೇಜು ಮುಗಿಸಿ ಮಂಗಳೂರಿಗೆ ಪ್ರವಾಸಕ್ಕೆಂದು ನಾಲ್ವರು ಸ್ನೇಹಿತರು ಜೊತೆಗೆ ಬಂದಿದ್ದರು. ಇದೇ ವೇಳೆ ಹೊಸಬೆಟ್ಟು ಬಳಿ ನಿರ್ಮಾಣ ಹಂತದ ಜೆಟ್ಟಿ ಬಳಿ ಸಮುದ್ರಕ್ಕಿಳಿದ ನಾಲ್ವರು ನೀರಿನ ಸೆಳೆತಕ್ಕೆ ಸಮುದ್ರಪಾಲಾದರು. ತಕ್ಷಣ ಎಚ್ಚೆತ್ತ ಸ್ಥಳೀಯರಾದ ವಿದ್ಯಾದರ್ ಸೇರಿದಂತೆ ಸ್ಥಳದಲ್ಲಿ ಕೆಲವರು ಸಮುದ್ರ ಪಾಲಾದರ ರಕ್ಷಣೆಗೆ ಮುಂದಾದರು, ಇದೇ ವೇಳೆಯಲ್ಲಿ ಬೀದರ್ ಜಿಲ್ಲೆಯ ಪರಮೇಶ್ವರ್ ಎಂಬಾತನ್ನು ರಕ್ಷಿಸಿದ್ದಾರೆ. ಉಳಿದ ಚಿತ್ರದುರ್ಗ ಜಿಲ್ಲೆಯ ಮಂಜುನಾಥ್ ಎಸ್, ಶಿವಮೊಗ್ಗ ಜಿಲ್ಲೆಯ ಶಿವಕುಮಾರ್, ಬೆಂಗಳೂರಿನ ಸತ್ಯವೇಲು ಎಂಬವರು ಸಮುದ್ರ ಪಾಲಾಗಿದ್ದು, ತೀವ್ರ ಶೋಧದ ಬಳಿಕ ಮೃತದೇಹ ಪತ್ತೆಯಾಗಿದೆ. ಮೃತದೇಹಗಳನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.