ಮಂಗಳೂರು ಮುಳುಗಲು ನಗರಪಾಲಿಕೆಯೇ ಕಾರಣ” : ಮಾಜಿ ಶಾಸಕ ಮೊಯಿದೀನ್ ಬಾವಾ
“ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೀನಕಳಿಯ, ಕೊಟ್ಟಾರ, ಹೊಸಬೆಟ್ಟು ಲೋಟಸ್ ಪಾರ್ಕ್ ಪ್ರದೇಶದಲ್ಲಿ ಮೊದಲ ಮಳೆಯಲ್ಲೇ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರು ಪಡಬಾರದ ಸಂಕಷ್ಟ ಅನುಭವಿಸಿದ್ದಾರೆ ಎಂದು ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಆರೋಪಿಸಿದ್ದಾರೆ.
ಸುರತ್ಕಲ್‍ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, , “2500 ಕೋಟಿ ರೂ. ಸ್ಮಾರ್ಟ್ ಸಿಟಿ ಹೆಸರಲ್ಲಿ ಹಣ ಬಂದಿದೆ. ಆದರೆ ಆ ಹಣ ಎಲ್ಲಿ ಹೋಯಿತು ಎಂದು ಬಾವಾ ಪ್ರಶ್ನಿಸಿದ್ದಾರೆ. ಸ್ಮಾರ್ಟ್ ಸಿಟಿ ಹೆಸರಲ್ಲಿ 25 ಲಕ್ಷ ರೂ. ಖರ್ಚು ಮಾಡಿ ಅಲ್ಲಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣದಲ್ಲಿ ಬಸ್ ಕಾಯುವುದು ಅಸಾಧ್ಯ. ಇದಕ್ಕೆ ಸ್ಥಳೀಯ ಶಾಸಕರು ಮತ್ತು ಆಡಳಿತವೇ ನೇರ ಹೊಣೆ. ಮಾಲೆಮಾರ್, ಕೊಟ್ಟಾರ ಪರಿಸರದ ಚರಂಡಿ ಹೂಳಿನಿಂದ ತುಂಬಿದ್ದು ಪ್ರತೀ ಮಳೆಗಾಲದಲ್ಲೂ ನೀರು ಸರಾಗವಾಗಿ ಹರಿದು ಹೋಗದೆ ಸಮಸ್ಯೆಯಾಗುತ್ತಿದೆ. ಭರತ್ ಶೆಟ್ಟಿಯವರೇ ಈ ಭಾಗದ ಜನರ ಮತಗಳನ್ನು ಪಡೆದು ನೀವು ಗೆದ್ದಿದ್ದೀರಿ. ನಿಮಗೆ ಜನರ ಸೇವೆ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನಾಲ್ಕು ವರ್ಷಗಳಲ್ಲಿ ಸರಿಯಾದ ರಸ್ತೆ ನಿರ್ಮಾಣ ಮಾಡಲು ನಿಮ್ಮಿಂದ ಸಾಧ್ಯವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರಾಜಸ್ಥಾನದಲ್ಲಿ ಮತೀಯವಾದಿಗಳಿಂದ ಹತ್ಯೆಗೀಡಾಗಿರುವ ಕನ್ನಯ್ಯ ಲಾಲ್ ಎಂಬ ಬಡಪಾಯಿ ಟೈಲರ್ ಹಂತಕರನ್ನು ಕೂಡಲೇ ಗಲ್ಲಿಗೇರಿಸಬೇಕು. ಅವರ ಪರವಾಗಿ ಯಾರೂ ವಕಾಲತ್ತು ನಡೆಸಬೇಕಾದ ಅಗತ್ಯವಿಲ್ಲ. ಇಸ್ಲಾಂ ಯಾವತ್ತೂ ಯಾರನ್ನೂ ಹೊಡಿ ಬಡಿ ಕೊಲ್ಲು ಎಂದು ಹೇಳಿಲ್ಲ. ಇಂತವರು ಪವಿತ್ರ ಇಸ್ಲಾಂ ಧರ್ಮಕ್ಕೆ ಮಾರಕವಾಗಿದ್ದಾರೆ. ಇಂತವರನ್ನು ಜೈಲಲ್ಲಿಟ್ಟು ಸಾಕುವ ಬದಲು ಕೂಡಲೇ ಗಲ್ಲಿಗೇರಿಸಬೇಕು” ಎಂದು ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಆಕ್ರೋಶ ವ್ಯಕ್ತಪಡಿಸಿದರು.