ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಆರಾಧ್ಯ ದೈವ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಮಂಗಳೂರು: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮೀಜಿಯವರಿಂದ ಪ್ರತಿಷ್ಠಾಪಿಸಲ್ಪಟ್ಟು, ಮಂಗಳೂರು ಪ್ರಾಂತ್ಯದ ಹವ್ಯಕ ಸಮುದಾಯ ಮತ್ತು ಸಮಸ್ತ ಸಮಾಜದ ಶ್ರದ್ಧಾಕೇಂದ್ರವಾಗಿ ಐದು ದಶಕಗಳಿಂದ ಮನೆ ಮಾತಾಗಿರುವ ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಆರಾಧ್ಯ ದೈವ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ 2023ರ ಜನವರಿ 22ರಿಂದ 26ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ.

ದೇಗುಲ ಒಂದು ಮಂಡಲ (48 ವರ್ಷ) ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪರಮಪೂಜ್ಯರ ಮಹತ್ಸಂಕಲ್ಪದೊಂದಿಗೆ ಅತ್ಯಪೂರ್ವ ಎನಿಸಿದ ನೂತನ ಶಿಲಾಮಯ ಗರ್ಭಾಗಾರ ದಾಖಲೆ 110 ದಿನಗಳ ಅವಧಿಯಲ್ಲಿ ಪೂರ್ಣಗೊಂಡಿದ್ದು, ಮಾಘ ಮಾಸದ ಪ್ರತಿಪದೆಯಿಂದ ಪಂಚಮಿಯವರೆಗೆ ಐದು ದಿನಗಳ ಕಾಲ ವಿಧಿವತ್ತಾಗಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಶ್ರೀಮಠದ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಶುಭಾವಸರದಲ್ಲಿ ಇಪ್ಪತ್ತು ಸಹಸ್ರ ಮಂದಿಗೂ ಅಧಿಕ ಭಕ್ತರಿಗೆ ಅಚ್ಚುಗಟ್ಟಾದ ಭೋಜನ ವ್ಯವಸ್ಥೆ ಮಾಡಲು ಅನುವಾಗುವಂತೆ ನಾಡಿನ ಮೂಲೆ ಮೂಲೆಗಳಿಂದ ಬಂದ ಹಸಿರುವಾಣಿ ಮೆರವಣಿಗೆ 21ರಂದು ಸಂಜೆ 4ಕ್ಕೆ ಪೆರಾಜೆ ಕೋದಂಡರಾಮ ಮಹಾದ್ವಾರದಿಂದ ಆರಂಭವಾಗಲಿದ್ದು, ಶ್ರೀಮಠಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಮರುದಿನ ಅಂದರೆ 22ರಂದು ಮಧ್ಯಾಹ್ನ 3 ಗಂಟೆಗೆ ಪರಮಪೂಜ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಪುರಪ್ರವೇಶ ನಿಗದಿಯಾಗಿದೆ. ಶ್ರೀಗಳನ್ನು ಪೂರ್ಣಕುಂಭ ಹಾಗೂ ಛತ್ರ ಚಾಮರಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆದೊಯ್ಯಲಾಗುತ್ತದೆ. ನಾಡಿನ ಖ್ಯಾತ ಸಾಂಸ್ಕøತಿಕ ಮತ್ತು ಜಾನಪದ ತಂಡಗಳು, ಕುಣಿತ ಭಜನಾ ತಂಡಗಳು, ನೃತ್ಯಚೆಂಡೆ ತಂಡಗಳು ಈ ಮೆರವಣಿಗೆಗೆ ಮೆರುಗು ನೀಡಲಿವೆ. 23ರಿಂದ 26ರವರೆಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಭಜನೆ ಮತ್ತು 22ರಿಂದ 25ರವರೆಗೆ ಪ್ರತಿದಿನ ಸಂಜೆ 7ರಿಂದ 10ರವರೆಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಮುದ ನೀಡಲಿವೆ.

23ರಂದು ಸೋಮವಾರ ಬೆಳಿಗ್ಗೆ 11.20ರ ಮೀನಲಗ್ನ ಸುಮೂರ್ಹದಲ್ಲಿ ರಾಘವೇಶ್ವರ ಶ್ರೀಗಳ ಅಮೃತಹಸ್ತಗಳಿಂದ, ಗೋಕರ್ಣದ ವೇದಮೂರ್ತಿ ಶ್ರೀ ಅಮೃತೇಶ ಭಟ್ಟ ಹಿತೇ ಅವರ ಆಚಾರ್ಯತ್ವದಲ್ಲಿ ಸಪರಿವಾರ ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವರ ಪುನಃಪ್ರತಿಷ್ಠೆ ನಡೆಯಲಿದೆ. ಜತೆಗೆ ಸರ್ವಾಲಂಕಾರ ಭೂಷಿತ ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಶ್ರೀಗುರುಭಿಕ್ಷಾ ಸೇವೆ ಮತ್ತು ಸೂತ್ರಸಂಗಮ ಜರುಗಲಿದೆ.

25ರಂದು ಪರಮಪೂಜ್ಯರಿಂದ ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ ಹಾಗೂ ಶ್ರೀರಾಮದೇವರಿಗೆ ಸ್ವರ್ಣಕವಚ, ಶ್ರೀ ಮಹಾಗಣಪತಿ ದೇವರಿಗೆ ರಜತ ಕವಚ ಸಮರ್ಪಣೆಗೊಳ್ಳಲಿದೆ.23ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ರಾಘವೇಶ್ವರಭಾರತೀಸ್ವಾಮೀಜಿವರ ಸಾನ್ನಿಧ್ಯದಲ್ಲಿ ಧರ್ಮಸಭೆ ಸಂಪನ್ನಗೊಳ್ಳಲಿದೆ. ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್, ಗೋಕರ್ಣದ ತಂತ್ರಿಗಳಾದ ವೇದಮೂರ್ತಿ ಶ್ರೀ ಅಮೃತೇಶ ಭಟ್ಟ ಹಿರೇ, ವಾಸ್ತುಶಿಲ್ಪ ತಜ್ಞ ಮಹೇಶ್ ಮುನಿಯಂಗಣ, ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿಗಳು, ಸಚಿವರಾದ ಸುನೀಲ್ ಕುಮಾರ್, ಎಸ್.ಅಂಗಾರ, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳೀನ್ ಕುಮಾರ್ ಕಟೀಲು, ಶಾಸಕರಾದ ರಾಜೇಶ ನಾಯ್ಕ್, ಸಂಜೀವ ಮಠಂದೂರು, ಹರೀಶ್ ಪೂಜಾ, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಪ್ರತಾಮಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ತಿಮ್ಮಪ್ಪಯ್ಯ ಮಡಿಯಾಲ, ಕರ್ನಾಟಕ ಬ್ಯಾಂಕ್ ಎಂಡಿ ಎಂ.ಎಸ್.ಮಹಾಬಲೇಶ್ವರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸೇರಿದಂತೆ ಹಲವು ಮಂದಿ ಗಣ್ಯರು ಇದರಲ್ಲಿ ಭಾಗವಹಿಸುವರು.

ಏನಿದರ ವೈಶಿಷ್ಟ್ಯ?
ಜಿಲ್ಲೆಯಲ್ಲಿ ತೀರಾ ಅಪರೂಪದ್ದು ಎನಿಸಿದ ಸಂಪೂರ್ಣ ಶಿಲಾಮಯ ಗರ್ಭಗೃಹ ಅದ್ಭುತವಾದ ರಚನೆ, ಸುಂದರವಾಗಿ ರೂಪುಗೊಂಡ ಶಿಲೆಯ ಏರಿಳಿತಗಳು, ಉಬ್ಬು ತಗ್ಗುಗಳು, ಎದ್ದು ನಿಂತ ಸಿಂಹ ರೂಪಗಳು, ಅದರ ಕಾಲಿನ ಸೂಕ್ಷ್ಮ ನಖಗಳು, ಹೂವಿನ ಅಲಂಕಾರಗಳು ಹೀಗೆ ಒಂದೊಂದೂ ವಿಶಿಷ್ಟ- ಸುಂದರ. ಹಿಂದೆ ಇದ್ದ ಗರ್ಭಗುಡಿಯ ಎರಡು ಪಟ್ಟಿನಷ್ಟು ಎತ್ತರದ ಭವ್ಯ ಮಂದಿರ ಆಸ್ತಿಕರಿಗೆ ಅಪೂರ್ವತಾಣ ಎನಿಸಲಿದೆ.

ರಾಘವೇಂದ್ರ ಭಾರತೀ ಶ್ರೀಗಳ ಅಮೃತಹಸ್ತಗಳಿಂದ ಪ್ರತಿಷ್ಠಾಪನೆಗೊಂಡು ಆರಾಧಿಸಲ್ಪಡುತ್ತಿದ್ದ ಸಪರಿವಾರ ಶ್ರೀರಾಮದೇವರ ಗರ್ಭಗೃಹ ಪೂರ್ಣ ಮಂಡಲವನ್ನು ಕಂಡು ಜೀರ್ಣಾವಸ್ಥೆ ತಲುಪುವ ಮುನ್ನವೇ ಸಂಪೂರ್ಣ ಶಿಲಾಮಯ ಗರ್ಭಾಗಾರ ನಿರ್ಮಾಣಕ್ಕೆ ರಾಘವೇಶ್ವರ ಶ್ರೀಗಳು ಆದೇಶವಿತ್ತು ಕೇವಲ 110 ದಿನಗಳಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಮುರ್ಡೇಶ್ವರದ ಕೃಷ್ಣ ಶಿಲ್ಪಿಯವರು ಈ ಸುಂದರ ಶಿಲ್ಪವನ್ನು ಅಲ್ಪಕಾಲದಲ್ಲೇ ನಿರ್ಮಿಸಿಕೊಟ್ಟಿದ್ದಾರೆ.
ಕಾಮಗಾರಿಗೆ ಮುನ್ನವೇ ಪುನಃಪ್ರತಿಷ್ಠಾ ದಿನ ನಿಗದಿಪಡಿಸಿಕೊಂಡು ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದ್ದು, ಜತೆಗೆ ನವೀಕೃತ ಸುತ್ತುಪೌಳಿ, ಕಿರು ಸಭಾಭವನ, ಯಾಗಶಾಲೆ ಕೂಡಾ ತಲೆ ಎತ್ತಿನಿಂತಿದೆ. ಜಿಲ್ಲೆಯ ಸಮಸ್ತ ಸಮಾಜ ಬಾಂಧವರು ಈ ಶುಭಾವಸರಕ್ಕೆ ಸಾಕ್ಷಿಗಳಾಗಬೇಕೆಂದು ಶ್ರೀರಾಮಚಂದ್ರಾಪುರಮಠದ ಮಹಾಸಮಿತಿ ಮತ್ತು ಕ್ರಿಯಾಸಮಿತಿ ಆದರಪೂರ್ವಕವಾಗಿ ಆಮಂತ್ರಿಸುತ್ತಿದೆ.
ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಮತ್ತು ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷೆ ಶೈಲಜಾ ಕೊಂಕೋಡಿ, ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶ ಮೋಹನ ಕಾಶೀಮಠ, ಉಪ್ಪಿನಂಗಡಿ ಹವ್ಯಕ ಮಂಡಲ ಕಾರ್ಯದರ್ಶಿ ವೇಣು ಕೆದಿಲ ಉಪಸ್ಥಿತರಿದ್ದರು.

Related Posts

Leave a Reply

Your email address will not be published.