ಮಂಜೇಶ್ವರ: ಪೆರಿಯ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐಎಂ ಮಾಜಿ ಶಾಸಕ ಸೇರಿದಂತೆ 14 ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು
![](http://v4news.com/wp-content/uploads/2024/12/2-3-1140x620.jpg)
ಮಂಜೇಶ್ವರ: ಪೆರಿಯ ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಐಎಂ ಮಾಜಿ ಶಾಸಕ ಕೆವಿ ಕುಂಞಿರಾಮನ್ ಸೇರಿದಂತೆ 14 ಆರೋಪಿಗಳು ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
![](https://v4news.com/wp-content/uploads/2024/12/1-6-1024x542.jpg)
ಮೊದಲನೇ ಆರೋಪಿಯಾಗಿ ಸಿಪಿಎಂ ನೇತಾರರಾದ ಎ. ಪೀತಾಂಬರನ್, ಎರಡನೇ ಆರೋಪಿಯಾಗಿ ಸಜಿ ಸಿ ಜಾರ್ಜ್ ಎಂಬ ಸಜಿ, ಮೂರನೇ ಆರೋಪಿಯಾಗಿ ಕೆ.ಎಂ. ಸುರೆಶ್, ನಾಲ್ಕನೇ ಆರೋಪಿಯಾಗಿ ಕೆ ಅನಿಲ್ ಕುಮಾರ್ ಎಂಬ ಅಬು, ಐದನೇ ಆರೋಪಿಯಾಗಿ ಜಿಜಿನ್, ಆರನೇ ಆರೋಪಿಯಾಗಿ ಶ್ರೀರಾಗ್ ಎಂಬ ಕೂಟು, ಏಳನೇ ಆರೋಪಿಯಾಗಿ ಎ.ಅಶ್ವಿನ್ ಎಂಬ ಅಪ್ಪು, ಎಂಟನೇ ಆರೋಪಿಯಾಗಿ ಸುಬೀಷ್ ಎಂಬ ಮಣಿ, ಹತ್ತನೇ ಆರೋಪಿಯಾಗಿ ಟಿ. ರಂಜಿತ್ ಎಂಬ ಅಪ್ಪು, ಹದಿನಾಲ್ಕನೇ ಆರೋಪಿಯಾಗಿ ಕೆ. ಮಣಿಕಂಠನ್, ಹದಿನೈದನೇ ಆರೋಪಿಯಾಗಿ ಎ. ಸುರೇಂದ್ರ ಎಂಬ ವಿಷ್ಣು ಸುರ, ಇಪ್ಪತ್ತನೇ ಆರೋಪಿಯಾಗಿ ಕೆ.ವಿ ಕುಂಞರಾಮನ್, ಇಪ್ಪತ್ತೆರಡನೇ ಆರೋಪಿಯಾಗಿ ರಾಘವನ್ ವಳಂಜೋಳಿ, ಇಪ್ಪತ್ತಮೂರನೆ ಆರೋಪಿಯಾಗಿ ಕೆ.ವಿ ಭಾಸ್ಕರನ್ ಎಂಬವರನ್ನು ತಪ್ಪಸ್ಕರೆಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಮಾನಿಸಿ ತೀರ್ಪು ನೀಡಿದೆ.
ಪ್ರಕರಣದ ಹತ್ತು ಆರೋಪಿಗಳಾದ 9, 11, 12, 13, 16, 18, 17, 19, 23 ಹಾಗೂ 24 ನೇ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ. ಫೆಬ್ರವರಿ 17, 2019 ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್ ಮತ್ತು ಕೃಪೇಶ್ ಅವರನ್ನು ಕಡಿದು ಹತ್ಯೆಗೈದ ಘಟನೆಗೆ ಸಂಬಂಧಿಸಿ ದಾಖಲಾದ ಪ್ರಕರಣವಾಗಿದೆ. ಪ್ರಕರಣದಲ್ಲಿ ಮಾಜಿ ಶಾಸಕ ಕೆವಿ ಕುಂಞಿರಾಮನ್, ಸಿಪಿಎಂ ನಾಯಕರು ಸೇರಿದಂತೆ 24 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು.
ಪೆರಿಯಾ ಜೋಡಿ ಕೊಲೆ ಪ್ರಕರಣವನ್ನು ಆರಂಭದಲ್ಲಿ ಪೊಲೀಸರು ಮತ್ತು ನಂತರ ಕ್ರೈಂ ಬ್ರಾಂಚ್ ತನಿಖೆ ನಡೆಸಿದ್ದರು, ನಂತರ ಹೈಕೋರ್ಟ್ ಸೂಚನೆಯಂತೆ ಸಿಬಿಐಗೆ ವಹಿಸಲಾಯಿತು. ಪ್ರಕರಣದಲ್ಲಿ 270 ಸಾಕ್ಷಿಗಳಿದ್ದರು. ತಿರುವನಂತಪುರಂನಲ್ಲಿರುವ ಸಿಬಿಐ ಘಟಕ ಪ್ರಕರಣದ ತನಿಖೆ ನಡೆಸಿದೆ. ಫೆಬ್ರವರಿ 2, 2023 ರಂದು ಕೊಚ್ಚಿ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿತ್ತು.
ಆರೋಪಿಗಳ ಪಟ್ಟಿಯಲ್ಲಿ ಆರಂಭದಲ್ಲಿ 14 ಮಂದಿ ಇದ್ದರು. ಈ ಪೈಕಿ 11 ಮಂದಿಯನ್ನು ಬಂಧಿಸಲಾಗಿದೆ. ನಂತರ ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡಾಗ ಇನ್ನೂ ಹತ್ತು ಮಂದಿಯನ್ನು ಆರೋಪಿಗಳನ್ನಾಗಿ ಸೇರಿಸಲಾಯಿತು.
ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಲ್ಲಿಯೋಟ್ ಪ್ರದೇಶವನ್ನು ಒಳಗೊಂಡಿರುವ ಪೆರಿಯ ಗ್ರಾಮದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.
![](http://v4news.com/wp-content/uploads/2024/11/add-OBG-819x1024.jpg)