ಮಂಜೇಶ್ವರ : ಕಸದ ತೊಟ್ಟಿಯಾಗಿ ದುರ್ನಾತ ಬೀರುತ್ತಿರುವ ಪುರಾತನ ಬಾವಿ

ಮಂಜೇಶ್ವರ : ಮಂಜೇಶ್ವರ ಗ್ರಾ.ಪಂ. ನ 17ನೇ ವಾರ್ಡು ವ್ಯಾಪ್ತಿಯಲ್ಲಿರುವ ಪುರಾತನ ಬಾವಿಯೊಂದು ಈಗ ಕಸದ ತೊಟ್ಟಿಯಾಗಿ ದುರ್ನಾತ ಬೀರುತ್ತಿದ್ದು ಅವಸಾನದ ಅಂಚಿಗೆ ತಲುಪಿದ್ದರೂ ಈ ಬಾವಿಯ ನೀರನ್ನು ಸಮೀಪದ ಹೋಟೆಲ್, ಬೇಕರಿ, ಜ್ಯೂಸ್ ಅಂಗಡಿ, ಪಾನಿಪುರಿ ಸ್ಟಾಲ್ ಗಳಿಗೆ ವರ್ಷಗಳಿಂದ ಉಪಯೋಗಿಸುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
ವರ್ಷಗಳ ಹಿಂದೆ ಪರಿಸರದ ನಾಗರಿಕರ ನೀರಿನ ದಾಹ ತೀರಿಸುತ್ತಿದ್ದ ಬಾವಿಯನ್ನು ಈಗ ಕಸ ಎಸೆಯಲು ಬಳಸುತ್ತಿರುವುದರಿಂದ ಬಾವಿಯ ನೀರು ಪೂರ್ಣವಾಗಿ ದುರ್ನಾತ ಬೀರುತಿದ್ದರೂ ಇದೇ ಬಾವಿಯಿಂದ ವ್ಯಾಪಾರ ಕೇಂದ್ರಗಳಿಗೆ ನೀರನ್ನು ಬಳಸುತ್ತಿರುವುದನ್ನು ಕಂಡೂ ಕಾಣದ ರೀತಿಯಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಪಂ. ಅಧಿಕೃತರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಬಾವಿಯ ನಿರ್ವಹಣೆಯೇ ಇಲ್ಲದ ಕಾರಣ ಬಾವಿಯ ಒಳಗೆ ಸುತ್ತಲೂ ಗಿಡಗಂಟಿಗಳು ಬೆಳೆದು ವಿಷ ಜಂತುಗಳು ವಾಸ ಮಾಡುವಂತಾಗಿದೆ. ಬಾವಿಯಲ್ಲಿ ಪ್ರತಿದಿನ ತ್ಯಾಜ್ಯ ಎಸೆಯುವುದರಿಂದ ಈ ಭಾಗದಿಂದ ಬರುವವರಿಗೆ ದುರ್ವಾಸನೆ ಬರುತ್ತಿದೆ ಜೊತೆಯಾಗಿ ಸುತ್ತಲಿನ ಮನೆಗಳ ಜನರಿಗೂ ದುರ್ವಾಸನೆ ಅಸಹನೀಯವಾಗಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ನೀರನ್ನು ಬಳಸುವ ವ್ಯಾಪರಿಗಳ ವಿರುದ್ಧ ಸಂಬಂಧಪಟ್ಟವರು ಕಠಿಣ ಕ್ರಮ ಕೈ ಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬಾವಿಯ ಸುತ್ತಲಿನ ಗೋಡೆಯು ಹಾಳಾಗುತ್ತಿದ್ದು, ಬಾವಿಯ ಗೋಡೆ ಎತ್ತರಿಸದ ಕಾರಣ ಅಪಾಯದ ಸ್ಥಳವಾಗಿದೆ. ಜನರು ಸಹ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬೇಕು. ಈಗಲೂ ಬಾವಿ ಉತ್ತಮವಾದ ಅಂತರ್ಜಲ ಹೊಂದಿದ್ದು, ಬಾವಿಯಲ್ಲಿ ತ್ಯಾಜ್ಯ ಎಸೆಯದಂತೆ ಸುತ್ತಲೂ ಎತ್ತರವಾದ ಗೋಡೆ ನಿರ್ಮಿಸಿ ಬಾವಿಗೆ ಕಬ್ಬಿಣದ ಜಾಲರಿಯಿಂದ ರಕ್ಷಣೆ ಒದಗಿಸಿ ಮರು ಜೀವ ನೀಡಿದರೆ ಪುರಾತನ ಬಾವಿಯನ್ನು ರಕ್ಷಿಸಿ ಉಳಿಸಿದಂತಾಗಬಹುದಾಗಿಯೂ ಸ್ಥಳೀಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.