ಅಡುಗೆ ಅನಿಲ ವಿತರಣೆಯಲ್ಲಿ ಅಕ್ರಮ ಆರೋಪ : ವೀಡಿಯೋ ವೈರಲ್
ಮಂಜೇಶ್ವರಂ: ಮಂಜೇಶ್ವರ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅನಂತ ಗ್ಯಾಸ್ ಏಜೆನ್ಸಿ ಮೂಲಕ ವಿತರಿಸಲಾಗುತ್ತಿರುವ ಅಡುಗೆ ಅನಿಲ ವಿತರಣೆಯಲ್ಲಿ ತೂಕ ಕಡಿಮೆ ಇರುವುದಾಗಿ ಆರೋಪಿಸಿ ಗ್ರಾಹಕರೊಬ್ಬರು ವೀಡಿಯೋ ಒಂದನ್ನು ವೈರಲ್ ಮಾಡಿದ ಬೆನ್ನಲ್ಲೇ ಗ್ರಾಹಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.ಆದರೆ ಏಜನ್ಸಿ ಕಚೇರಿ ಮುಂಬಾಗದಲ್ಲಿ ಇರಿಸಲಾಗಿದ್ದ ತೂಕ ಕಡಿಮೆ ಕಂಡು ಬಂದ ಅಡುಗೆ ಅನಿಲವನ್ನು ಬೇರೆಯೇ ಇಡಲಾಗಿತ್ತೆಂದೂ ಅದನ್ನು ವಿತರಿಸುವ ಉದ್ದೇಶವಿರಲಿಲ್ಲವೆಂದೂ ಗ್ಯಾಸ್ ಏಜನ್ಸಿ ವಿತರಕರು ಪ್ರತಿಕ್ರಿಯೆ ನೀಡಿದ್ದಾರೆ.
ವೀಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಇದರ ಸತ್ಯಾಂಶ ತಿಳಿಯಲು ಎಐವೈಎಫ್ ಮಂಜೇಶ್ವರಂ ಮಂಡಲ್ ಸಮಿತಿಯ ನಿಯೋಗವು ಏಜನ್ಸಿ ಕಚೇರಿಗೆ ಬೇಟಿ ನೀಡಿ ತಪಾಸಣೆ ನಡೆಸಿದೆ. ಬಳಿಕ ಗ್ರಾಹಕರ ಸಮ್ಮುಖದಲ್ಲೇ ಸುಮಾರು 10 ರಷ್ಟು ಗ್ಯಾಸ್ ಸಿಲಿಂಡರ್‍ಗಳನ್ನು ತೂಕ ಮಾಡಿದೆ. ತೂಕದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲವೆಂಬುದಾಗಿ ಪ್ರತಿನಿಧಿಗಳು v4 ನ್ಯೂಸ್‍ಗೆ ತಿಳಿಸಿದರು.
ಗ್ರಾಹಕರು ಮನವಿ ಮಾಡಿದರೆ ವಿತರಣೆ ನಡೆಸುವಾಗ ಮನೆಯಲ್ಲೇ ಅಳತೆ ಮಾಡಿ ಸಿಲಿಂಡರ್ ನೀಡಬಹುದು ಎಂದು ಅನಂತ ಗ್ಯಾಸ್ ಏಜೆನ್ಸಿ ಮಾಲೀಕರು ಪ್ರತಿನಿಧಿಗಳ ಮುಂದೆ ಭರವಸೆ ನೀಡಿದರು. ಅಲ್ಲದೆ ತೂಕದಲ್ಲಿ ವ್ಯತ್ಯಾಸವೇನಾದರೂ ಕಂಡು ಬಂದರೆ ಹಿಂತಿರುಗಿಸಲು ವಿನಂತಿಸಲಾಗಿದೆ.ಎಐವೈಎಫ್ ಜಿಲ್ಲಾಧ್ಯಕ್ಷ ಅಜಿತ್ ಎಂಸಿ ಲಾಲ್ ಬಾಗ್, ಎಐವೈಎಫ್ ಮಂಜೇಶ್ವರಂ ಮಂಡಲದ ಅಧ್ಯಕ್ಷ ದಯಾಕರ ಮಾಡ, ಎಐವೈಎಫ್ ನೇತಾರರಾದ ಶನೀಶ್ ಮಂಜೇಶ್ವರ, ಧನ್ ರಾಜ್ ಕೀರ್ತೇಶ್ವರ್ ಮತ್ತಿತರರು ನಿಯೋಗದಲ್ಲಿದ್ದರು.