ಮಂಜೇಶ್ವರದ ಹೆದ್ದಾರಿಯಲ್ಲಿ ವಿದ್ಯುತ್ ಕಂಬ ಅಳವಡಿಕೆ ಅವ್ಯವಹಾರ ಆರೋಪ
ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಅಡ್ಡಲಾಗಿ ಇತ್ತೀಚೆಗೆ ಸ್ಥಾಪಿತವಾಗಿದ್ದ ವಿದ್ಯುತ್ ಕಂಬ ಅಳವಡಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಸ್ಥಳೀಯರಿಂದ ವ್ಯಾಪಕ ಆರೋಪಗಳು ಕೇಳಿ ಬರುತ್ತಿದೆ.
ಸರ್ವೀಸ್ ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರ, ಈ ಪೋಸ್ಟ್‌ಗಳನ್ನು ಕಾಂಕ್ರೀಟೀಕರಣಗೊಳಿಸಿ ಅಳವಡಿಸಲಾಗುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರಿಗೆ ಭರವಸೆ ನೀಡಿದ್ದರು. ಆದರೆ ಸೋಮವಾರ ಸಂಜೆ ಏಳು ಗಂಟೆ ಸುಮಾರಿಗೆ ತಲಪಾಡಿಯಿಂದ ಉದ್ಯಾವರ ತನಕ ಇರುವ ವಿದ್ಯುತ್ ಕಂಬಗಳನ್ನು ಸ್ಥಾಪಿಸುವಾಗ ಕರಾರಿನ ವಿನ್ಯಾಸದ ಪ್ರಕಾರ ಪೂರ್ಣಗೊಳಿಸಿದೆ ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಕಾಮಗಾರಿ ನಡೆಸುತ್ತಿರುವವರನ್ನು ತರಾಟೆಗೆ ತೆಗೆದು ಕೊಂಡ ಊರವರು ಕಾಮಗಾರಿಯನ್ನು ತಡೆದಿದ್ದಾರೆ.
ಬಳಿಕ ಕಾರ್ಮಿಕರು ವಿಷಯವನ್ನು ಗುತ್ತಿಗೆದಾರರ ಗಮನಕ್ಕೆ ತಂದಾಗ ಕೂಡಲೇ ಸ್ಥಳಕ್ಕಾಗಮಿಸಿದ ಸಂಬಂಧಪಟ್ಟವರು ತಪ್ಪೊಪ್ಪಿಕೊಂಡು ವಿನ್ಯಾಸದಂತೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಈ ವಿಷಯಕ್ಕೆ ಸಂಬಂಧಿಸಿ ರಾ. ಹೆದ್ದಾರಿ ಕ್ರಿಯಾಸಮಿತಿ ಪದಾಧಿಕಾರಿಗಳು ಕಾಮಗಾರಿಯ ವಿನ್ಯಾಸದ ಬಗ್ಗೆ ಮಾಹಿತಿ ಕೇಳಿದಾಗ 2.5 ಅಡಿ ಆಳದಲ್ಲಿ ಮತ್ತು 1.5 ಅಡಿ ಅಗಲದಲ್ಲಿ ಕಾಂಕ್ರೀಟ್ ಮಾಡ ವಿದ್ಯುತ್ ಕಂಬ ಅಳವಡಿಸುವುದಾಗಿ ಮಾಹಿತಿ ಲಭಿಸಿತ್ತು. ಆದರೆ ಧಾರಾಕಾರ ಸುರಿಯುವ ಮಳೆಯಲ್ಲಿ ಕಾರ್ಮಿಕರು ಕರಾರಿನ ವಿನ್ಯಾಸದಂತೆ ಕಾಮಗಾರಿಯನ್ನು ಪೂರ್ತಿಗೊಳಿಸಿದೆ ಭಾರೀ ಅವ್ಯವಹಾರ ನಡೆಸಿರುವುದಾಗಿ ಊರವರು ಆರೋಪಿಸಿದ್ದಾರೆ.