ಮಾತಾ ಅಮೃತಾನಂದಮಯಿ ಮಠದಲ್ಲಿ ಜ್ಯೋತಿಷ್ಯ ತರಬೇತಿ: ಭಾರತೀಯ ಜ್ಯೋತಿಷ್ಯ ಶಾಸ್ತ್ರ ಸರ್ವ ಶ್ರೇಷ್ಠ – ಡಾ.ಶಿಕಾರಿಪುರ ಕೃಷ್ಣಮೂರ್ತಿ
ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದಲ್ಲಿ ಭಾರತೀಯ ಜ್ಯೋತಿಷ್ಯ ಶಾಸ್ತ್ರದ ತರಬೇತಿ ಕಾರ್ಯಕ್ರಮಕ್ಕೆ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಅವರು ಆಶೀರ್ವಚನವಿತ್ತು ಜ್ಯೋತಿಷ್ಯ ಶಾಸ್ತ್ರದ ಜ್ಞಾನ ಪಡೆದುಕೊಳ್ಳಲು ಕರೆ ನೀಡಿದರು. ಭಾರತೀಯ ಜ್ಯೋತಿಷ್ಯ ಶಾಸ್ತ್ರವು ಖಗೊಳ ಲೆಕ್ಕಾಚಾರದಲ್ಲಿ ಅತ್ಯಂತ ನಿಖರವಾಗಿದ್ದು, ಅವುಗಳನ್ನು ಅರಿತು ಮುಂದೆ ಬರಬಹುದಾದ ಸಂಕಷ್ಟಗಳಿಗೆ ಸರಳ ಪರಿಹಾರೋಪಾಯಗಳನ್ನು ಅನುಸರಿಸಿ ಜೀವನದಲ್ಲಿ ನೆಮ್ಮದಿ ಸಹಿತ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದರು. ಅಮ್ಮನವರು ವಿಶ್ವದಾದ್ಯಂತ ಸಂಚರಿಸಿ ಜನರ ಸಂಕಷ್ಟಗಳನ್ನು ಆಲಿಸಿ ಅದಕ್ಕೆ ಪರಿಹಾರ ರೂಪಿಸುವ ಉದ್ದೇಶದಿಂದ ಬ್ರಹ್ಮಸ್ಥಾನ ಕ್ಷೇತ್ರಗಳನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಕೃತ ವಿದ್ವಾಂಸರಾದ ಡಾ.ಶಿಕಾರಿಪುರ ಕೃಷ್ಣಮೂರ್ತಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ಜ್ಯೋತಿಷ್ಯದ ಬಗ್ಗೆ ಸಾಮಾನ್ಯ ಅರಿವು ಮೂಡಿಸುವ ಮಠದ ಪ್ರಯತ್ನ ಶ್ಲಾಘನೀಯ ಎಂದರು.
“ವಿಶ್ವದಲ್ಲೇ ಭಾರತೀಯ ಜ್ಯೋತಿಷ್ಯ ಶಾಸ್ತ್ರವು ಅತ್ಯಂತ ಪುರಾತನವಾಗಿದ್ದು ಅದರಲ್ಲಿ ಗ್ರಹಣ ಇತ್ಯಾದಿಗಳ ಸಮಯ, ಭೂಮಿಯ ಪರಿಭ್ರಮಣ ಕಾಲ, ಗ್ರಹಗಳ ಚಲನೆ ಮತ್ತು ಅವುಗಳ ಪ್ರಭಾವ ಇತ್ಯಾದಿಗಳ ಬಗ್ಗೆ ಸುಸ್ಪಷ್ಟವಾಗಿ ತಿಳಿಸಲಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಖಗೋಳ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿದ್ದರೂ ಇಂದಿಗೂ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಸರ್ವಶ್ರೇಷ್ಠ ಹಾಗೂ ವಿಶ್ವಮಾನ್ಯವೆನಿಸಿದೆ. ಭಾರತೀಯರಾದವರು ನಮ್ಮ ಪೂರ್ವಜರು ನೀಡಿದ ಅಮೂಲ್ಯ ಕೊಡುಗೆಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಕರೆಯಿತ್ತರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ಅಧ್ಯಕ್ಷತೆ ವಹಿಸಿದ್ದರು.
ತರಬೇತಿ ನೀಡುವ ಜ್ಯೋತಿಷ್ಯ ಗುರು ಪ್ರವೀಣ್ ಚಂದ್ರ ಶರ್ಮ ತರಬೇತಿಯ ಪರಿಚಯವಿತ್ತು ಆಸಕ್ತರು ಭಾಗವಹಿಸಲು ಅವಕಾಶವಿದೆ ಎಂದರು.ಸೇವಾ ಸಮಿತಿಯ ಸದಸ್ಯ ಪ್ರವೀಣ್ ಶಬರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೆ. ಸದಾಶಿವ ಭಟ್ ವಂದಿಸಿದರು. ಪೂರ್ವಾಧ್ಯಕ್ಷ ಡಾ.ಜೀವರಾಜ್ ಸೊರಕೆ, ಅಮೃತ ಕುಟುಂಬದ ಮುರಳೀಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಜ್ಯೋತಿಷ್ಯ ಶಾಸ್ತ್ರ ಕಲಿಯುವ ಆಸಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.