ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ – ಬಿ.ಕೆ ಇಮ್ತಿಯಾಝ್

ಮಂಗಳೂರು: ಜಗತ್ತಿನ ಯಾವ ನಗರವೂ ಬೀದಿ ವ್ಯಾಪಾರಗಳಿಂದ ಹೊರತಾಗಿಲ್ಲ ಬೀದಿಬದಿ ವ್ಯಾಪಾರವೂ ಸಮಾಜದ ಭಾಗವಾಗಿದ್ದು ಬೀದಿ ವ್ಯಾಪಾರಕ್ಕೆ ಕಾನೂನಿನ ಅಂಗೀಕಾರಾವೂ ಸಿಕ್ಕಿದ ನಂತರ ಅವರ ಹಕ್ಕುಗಳನ್ನು ನಿರಾಕರಿಸುವುದು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಹೇಳಿದರು ಅವರು ಇಂದು ಮಂಗಳೂರು ಮಹಾ ನಗರಪಾಲಿಕೆ ಕಚೇರಿ ಎದುರು ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ನಗರದ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೆ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಕಾನೂನುಬಾಹಿರ ಧಾಳಿಗಳನ್ನು ನಡೆಸಿ ಅವರ ಸೊತ್ತುಗಳನ್ನು ಸರಕುಗಳನ್ನು ನಾಶಪಡಿಸುತ್ತಿದ್ದಾರೆ ಮತ್ತು ಬೀದಿ ವ್ಯಾಪಾರಿಗಳ ಮೇಲೆಯೇ ಪೊಲೀಸ್ ದೂರುಗಳನ್ನು ನೀಡುತ್ತಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಅವರು ಬೀದಿ ವ್ಯಾಪಾರಿಗಳು ಟೋಲ್ ಗೇಟ್ ವಿರುದ್ಧದ ಹೋರಾಟ ಬೆಂಬಲಿಸಿ ಭಾಗವಹಿಸಿದ್ದಾರೆ ಎಂದು ರಾಜಕೀಯ ಕಾರಣಗಳಿಗಾಗಿ ಆಹಾರ ಮಾರಾಟಗಾರರ ತರಬೇತಿ ಕಾರ್ಯಗಾರವನ್ನು ರದ್ದುಪಡಿಸಿದ್ದಾರೆ ಮತ್ತು ಬೀದಿ ವ್ಯಾಪಾರಿಗಳ ಮೇಲೆ ಧಾಳಿ ನಡೆಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಆರೋಪಿಸಿದ ಇಮ್ತಿಯಾಝ್ ಅವರು ಪಾಲಿಕೆಯ ವಿಪಕ್ಷ ಕಾಂಗ್ರೆಸ್ ಸದಸ್ಯರೂ ಕೂಡಾ ಬಡ ಬೀದಿ ವ್ಯಾಪಾರಿಗಳ ಮೇಲೆ ಎಫ್ ಐ ಆರ್ ದಾಖಲಿಸಲು  ಒತ್ತಾಯಿಸಿರುವುದು ಕಾಂಗ್ರೆಸ್ ಕೂಡಾ ಬಡವರ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ನಂತರ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ಸುಕುಮಾರ್ ತೊಕ್ಕೊಟ್ಟು ಅವರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ   ಶ್ರೀಮಂತರು ಕಾನೂನು ಮುರಿದರೆ ಕ್ರಮ ಕೈಗೊಳ್ಳುವ ಧೈರ್ಯ ಇಲ್ಲದ ಅಧಿಕಾರಿಗಳು ಬಡವರ ಮೇಲೆ ಕ್ರಮ ಕೈಗೊಳ್ಳಲು ಧೈರ್ಯ ತೋರಿಸಿರುವುದು ಪಾಲಿಕೆ ಆಡಳಿತ ಯಾರ ಪರ ಎಂಬುದನ್ನು ತೋರಿಸುತ್ತಿದೆ ಎಂದು ಅವರು ಹೇಳಿದರು.

ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಪ್ರಮುಖರಾದ ಆಸೀಫ್ ಬಾವ ಉರುಮನೆ, ಶ್ರೀಧರ ಭಂಡಾರಿ, ಸಿ.ಎಸ್ ಶಂಕರ್, ಸಂತೋಷ್ ಆರ್ ಎಸ್, ಅಬ್ದುಲ್ ರಹಿಮಾನ್ ಅಡ್ಯಾರ್, ನೌಷಾದ್ ಉಳ್ಳಾಲ, ಇಸ್ಮಾಯಿಲ್ ಉಳ್ಳಾಲ, ಶ್ರೀನಿವಾಸ್ ಕಾವೂರು, ಮೇರಿ ಡಿಸೋಜಾ, ಮೇಬಲ್ ಡಿಸೋಜ, ಚೆರಿಯೋನು ಸುರತ್ಕಲ್, ಗೋಪಾಲ ಕಂಕನಾಡಿ, ಆನಂದ ಲೇಡಿಹಿಲ್, ರವಿಕಲ, ಪ್ರವೀಣ್ ಕದ್ರಿ ಕ್ಲೋಡಿ ಡಿಸೋಜ ಕದ್ರಿ, ನವಾಜ್ ಕಣ್ಣೂರು, ರಿಯಾಜ್ ಎಲ್ಯರ್ ಪದವು, ಫೆಲಿಕ್ಸ್ ಸುರತ್ಕಲ್, ಹನೀಫ್ ಇಡ್ಯಾ ಮುಂತಾದವರು ಉಪಸ್ಥಿತರಿದ್ದರು

ಬೇಡಿಕೆಗಳು

1. ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಅನುಮೋದನೆ ಗೊಂಡಿರುವ 667 ಬಡ ಬೀದಿಬದಿ ವ್ಯಾಪಾರಿಗಳಿಗೆ ಕೂಡಲೇ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಿಸಬೇಕು

2. ಪಟ್ಟಣ ವ್ಯಾಪಾರ ಸಮಿತಿಯ ಸಭೆಯನ್ನು ಕೂಡಲೇ ನಿಗದಿಪಡಿಸಬೇಕು

3. ರದ್ದುಗೊಳಿಸಿರುವ ಆಹಾರ ಮಾರಾಟಗಾರರ ತರಬೇತಿ ಕಾರ್ಯಗಾರವನ್ನು ಕೂಡಲೇ ನಡೆಸಬೇಕು

4.ಪಟ್ಟಣ ವ್ಯಾಪಾರ ಸಮಿತಿಯ ನಿರ್ಣಯಗಳನ್ನು  ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು

5. ಬೀದಿಬದಿ ವ್ಯಾಪಾರಸ್ಥರ ಕುಂದು ಕೊರತೆಗಳು, ಅಧಿಕಾರಿಗಳ ಕಿರುಕುಳ ತಡೆಯಲಿಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕುಂದುಕೊರತೆ ನಿವಾರಣಾ ಸಮಿತಿ ರಚಿಸಬೇಕು

6.ಪಟ್ಟಣ ವ್ಯಾಪಾರ ಸಮಿತಿಯ ತೀರ್ಮಾನಗಳಲ್ಲಿ ರಾಜಕೀಯ ಹಸ್ತಕ್ಷೇಪ ತಡೆಯಬೇಕು

7. ಬಡ ಬೀದಿ ವ್ಯಾಪಾರಿಗಳ ಮೇಲೆ ರಾಜಕೀಯ ಪ್ರೇರಿತ ಧಾಳಿಗಳನ್ನು ನಿಲ್ಲಿಸಬೇಕು

ನಗರಪಾಲಿಕೆಯ ಉಪ ಆಯುಕ್ತರಾದ ರವಿ ಕುಮಾರ್ ಜಿ ಅವರು ಮನವಿ ಸ್ವೀಕರಿಸಿದರು ಮುಂದಿನ ಹದಿನೈದು ದಿನಗಳೊಗಾಗಿ ಪಟ್ಟಣ ವ್ಯಾಪಾರ ಸಮಿತಿ ಸಭೆ ನಡೆಸಬೇಕು ಎಂದು ಪ್ರತಿಭಟನಾಕಾರರು ಉಪ ಆಯುಕ್ತರನ್ನು ಒತ್ತಾಯಿಸಿದರು.

ಪ್ರತಿಭಟನೆಗೂ ಮುನ್ನ ಬಲ್ಲಾಳ್ ಬಾಗ್ ಜಂಕ್ಷನ್ನಿಂದ ಪಾಲಿಕೆ ಕಚೇರಿ ವರೆಗೆ ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಮತ್ತು ಜನಪ್ರತಿನಿದಿನಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು

Related Posts

Leave a Reply

Your email address will not be published.