ಮಂಗಳೂರು ಪಾಲಿಕೆಯ ಸಾಮಾನ್ಯ ಸಭೆ : `ನನ್ನ ವಾರ್ಡ್‍ನಲ್ಲಿಯೂ ಸಮಸ್ಯೆ ಇದೆ’ ಎಂದ ಮೇಯರ್!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುಂಬೆಯಿಂದ ಸರಬರಾಜಾಗುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯ ಕುರಿತಂತೆ ವಿಪಕ್ಷ ನಾಯಕ, ಸದಸ್ಯರಿಂದ ಹಿಡಿದು ಆಡಳಿತ ಪಕ್ಷದ ಸದಸ್ಯರನೇಕರು ಕೂಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖುದ್ದು ಮೇಯರ್ ಕೂಡಾ ತಮ್ಮ ವಾರ್ಡ್‍ನಲ್ಲಿಯೂ ಸಮಸ್ಯೆ ಇದೆ ಎಂದು ಹೇಳುವ ಮೂಲಕ ಸಮಸ್ಯೆಯ ಗಂಭೀರತೆಯನ್ನು ಪ್ರಸ್ತುತಪಡಿಸಿದರು.
ವಿಪಕ್ಷ ನಾಯಕ ನವೀನ್ ಡಿಸೋಜಾ ಅವರು ಸಭೆಯಲ್ಲಿ ನೀರಿನ ಸಮಸ್ಯೆಯ ವಿಷಯ ಪ್ರಸ್ತಾಪಿಸಿ ಜಲಸಿರಿ ಯೋಜನೆಯ ಅನುಷ್ಠಾನವಾಗುತ್ತಿರುವಂತೆಯೇ ಸಮಸ್ಯೆ ಕಾಣಿಸಿಕೊಂಡಿದೆ. ನವೆಂಬರ್ ತಿಂಗಳಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ ಎಂದರು.

ಸದಸ್ಯ ಶಶಿಧರ ಹೆಗ್ಡೆ, ಸಂಗೀತ ಆರ್. ನಾಯಕ್ ಸೇರಿದಂತೆ ಸದಸ್ಯರನೇಕರು ತಮ್ಮ ವಾರ್ಡ್‍ಗಳಲ್ಲಿನ ನೀರಿನ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು.
ಇನ್ನು ಎಲ್‍ಇಡಿ ದಾರಿದೀಪ ಅಳವಡಿಕೆ ಕಾರ್ಯ ಟೆಂಡರ್ ವಹಿಸಿದವರ ಅವಧಿ ಮುಗಿದರೂ ಇನ್ನೂ ದೀಪಗಳು ಅಳವಡಿಕೆಯಾಗಿಲ್ಲ. ಈ ಬಗ್ಗೆ ಸ್ಪಷ್ಟ ಉತ್ತರ ಬೇಕು ಎಂದು ವಿಪಕ್ಷ ನಾಯಕ ನವೀನ್ ಡಿಸೋಜಾ ಆಗ್ರಹಿಸಿದರು.
ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಆಗಿದೆ. ಕಳೆದ ನವೆಂಬರ್‍ಗೆ ಗುತ್ತಿಗೆದಾರರ ಅವಧಿ ಮುಗಿದಿದ್ದರೂ ಕೋವಿಡ್ ಕಾರಣದಿಂದ ಅವಧಿ ವಿಸ್ತರಣೆ ಮಾಡಲಾಗಿತ್ತು. ಅದರಂತೆ ಈ ನವೆಂಬರ್‍ವರೆಗೆ ಅವರಿಗೆ ಅವಧಿ ವಿಸ್ತರಿಸಿದ್ದರೂ ಶೇ. 20ರಷ್ಟು ದೀಪಗಳ ಅಳವಡಿಕೆಯಾಗಿಲ್ಲ. ಈ ಬಗ್ಗೆ ಗುತ್ತಿಗೆದಾರರು ಸೂಕ್ತ ದಾಖಲೆಯನ್ನೂ ಒಪ್ಪಿಸಿಲ್ಲ. ಅವರಿಗೆ ಹಲವು ನೋಟೀಸು ನೀಡಲಾಗಿದೆ. ಇದೀಗ ಅವರ ಗುತ್ತಿಗೆಯನ್ನು ರದ್ದುಪಡಿಸಿ ಹೊಸ ಟೆಂಡರ್‍ಗೆ ನಿರ್ಧರಿಸಲಾಗಿದೆ ಎಂದರು.

ಸಭೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಟೆಂಡರ್‍ನಲ್ಲಿ ಭ್ರಷ್ಟಾಚಾರ ಆರೋಪ ಆಗ್ತಾ ವಿಪಕ್ಷ ಸದಸ್ಯರು ಆರೋಪಿಸಿದ್ರು. ಇದು
ನಿರಾಧಾರ ಆರೋಪ ಎಂದು ಆಡಳಿತ ಪಕ್ಷ ಸಮಜಾಯಿಷಿ ನೀಡಿದರು.ಈ ಬಗ್ಗೆ ಕೆಲಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಯಿತು. ಆಯುಕ್ತ ಅಕ್ಷಯ್ ಶ್ರೀಧರ್ ನಡುವೆ ಪ್ರತಿಕ್ರಿಯಿಸುವ ಸಂದರ್ಭ ಕಾನೂನಿನ ವಿಚಾರ ಪ್ರಸ್ತಾಪಿಸಿದರು. ಕಾನೂನು ವಿಚಾರ ನನಗೆ ಕಲಿಸಬೇಡಿ, ನನಗೆ ಗೊತ್ತಿದೆ ಎಂದು ವಿನಯ್‍ರಾಜ್ ಪ್ರತಿಕ್ರಿಯಿಸಿದಾಗ ಆಯುಕ್ತ ಅಕ್ಷಯ್ ಶ್ರೀಧರ್, ಸ್ವಲ್ಪ ಏರು ಧ್ವನಿಯಲ್ಲಿ ಗೊತ್ತಿದ್ದರೆ ಕುಳಿತುಕೊಳ್ಳಿ ಎಂದು ಹೇಳಿದ್ದು, ವಿಪಕ್ಷ ಸದಸ್ಯರನ್ನು ಕೆರಳಿಸಿತು.
ವಿಪಕ್ಷ ಸದಸ್ಯರು ಈ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಸದನದಲ್ಲಿ ಪಟ್ಟು ಹಿಡಿದರು. ಕೆಲಹೊತ್ತು ಸದನದಲ್ಲಿ ಈ ಬಗ್ಗೆ ವಾಗ್ವಾದ ನಡೆಯಿತು.

ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲ ಕಾವ, ಹೇಮಲತಾ ರಘು ಸಾಲ್ಯಾನ್, ಕಿಶೋರ್ ಕೊಟ್ಟಾರಿ, ನಯನ ಆರ್. ಕೋಟ್ಯಾನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.