ಮೈಟ್ ಎಂಜಿನಿಯರಿಂಗ್ ಕಾಲೇಜಿನ ಆವರಣಗೋಡೆ ಕುಸಿದು ಬಿದ್ದು ಮೂರು ವಾಹನಗಳಿಗೆ ಹಾನಿ

ಮೂಡುಬಿದಿರೆ:ತಾಲ್ಲೂಕಿನ ವಿವಿದೆಡೆ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೈಟ್ ಎಂಜಿನಿಯರಿಂಗ್ ಕಾಲೇಜಿನ ಆವರಣಗೋಡೆ ಕುಸಿದು ಬಿದ್ದು ಮೂರು ವಾಹನಗಳಿಗೆ ಹಾನಿಯಾಗಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ನಡೆಯುತ್ತಿದ್ದು ಆವರಣಗೋಡೆಯ ಬದಿಯಲ್ಲಿ ಪೋಷಕರ ವಾಹನಗಳನ್ನು ನಿಲ್ಲಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಸುಮಾರು 20 ಅಡಿ ಎತ್ತರದಲ್ಲಿದ್ದ ಆವರಣಗೋಡೆ ಕುಸಿದು ಹತ್ತಿರದಲ್ಲಿದ್ದ ಮೂರು ಕಾರುಗಳ ಮೇಲೆ ಬಿದ್ದು ಹಾನಿಗೊಳಿಸಿದೆ. ಮೈಟ್ ಆವರಣಗೋಡೆ ಇರುವ ಜಾಗ ಈ ಹಿಂದೆ ನೀರಿನ ಒರತೆಯಿದ್ದ ಗದ್ದೆಯಾಗಿತ್ತೆನ್ನಲಾಗಿದೆ. ಅಲ್ಲದೆ ಹತ್ತಿರದಲ್ಲಿ ನೀರು ಹರಿಯುವ ಸಣ್ಣಪುಟ್ಟ ತೋಡುಗಳಿದ್ದು ಖಾಸಗಿಯವರು ಅತಿಕ್ರಮಿಸಿದ್ದಾರೆನ್ನಲಾಗಿದ್ದು ಮಳೆಗಾಲದಲ್ಲಿ ಇಲ್ಲಿ ನೀರು ಹರಿಯುವುದಕ್ಕೆ ತಡೆ ಉಂಟಾಗಿದೆ ಎನ್ನಲಾಗಿದೆ.