ತಕ್ಷಣವೇ ಬೈಂದೂರು ಕ್ಷೇತ್ರಕ್ಕೆ ಪಶುವೈದ್ಯರನ್ನು ನೇಮಿಸಿ – ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು: ರಾಜ್ಯ ಸರ್ಕಾರ ವಿವಿಧ ಜಿಲ್ಲೆಗಳಿಗೆ ಪಶು ವೈದ್ಯರನ್ನು ನೇಮಕ ಮಾಡುತ್ತಿದ್ದು, ಬೈಂದೂರು ತಾಲೂಕಿಗೆ ಇನ್ನೂ ಪಶುವೈದ್ಯರ ನೇಮಕ ಮಾಡದೆ ಇರುವ ರಾಜ್ಯ ಸರ್ಕಾರದ ಕ್ರಮವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ತೀವ್ರವಾಗಿ ಖಂಡಿಸಿದ್ದಾರೆ.
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪಶುವೈದ್ಯರ ಕೊರತೆಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಈಗಾಗಲೇ ವಿಧಾನ ಮಂಡಲ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗಿತ್ತು. ನೇಮಿಸುವ ಭರವಸೆಯನ್ನು ನೀಡಿದ್ದರು. ಆದರೆ ಇದೀಗ ಪಶುವೈದ್ಯರ ನೇಮಕಾತಿ ಎಲ್ಲಾ ಜಿಲ್ಲೆಗಳಲ್ಲೂ ನಡೆಯುತ್ತಿದೆ. ನಮ್ಮ ಕ್ಷೇತ್ರಕ್ಕೆ ಇನ್ನೂ ಪಶುವೈದ್ಯರ ನೇಮಕ ಆಗಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸರ್ಕಾರ ಈ ಕೂಡಲೇ ಬೈಂದೂರು ಕ್ಷೇತ್ರಕ್ಕೆ ಪಶುವೈದ್ಯರ ನೇಮಕ ಮಾಡಬೇಕು. ಇಲ್ಲವಾದರೆ ಉಗ್ರ ರೀತಿಯ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಶಾಸಕರಾದ ಗುರುರಾಜ್ ಗಂಟೆಹೊಳೆಯವರು ಎಚ್ಚರಿಕೆ ನೀಡಿದರು.
ಕ್ಷೇತ್ರದಲ್ಲಿ ಪಶು ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಅನೇಕ ರೀತಿಯ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಶುಸಂಗೋಪನೆ ಇಲಾಖೆ ಸಚಿವರಿಗೂ ಗಮನಕ್ಕೆ ತಂದಿದ್ದೇನೆ. ಗ್ರಾಮೀಣ ಭಾಗದ ಸಮಸ್ಯೆ ಅರಿತು ಸಚಿವರ ಕೂಡಲೇ ಪಶುವೈದ್ಯಾಧಿಕಾರಿಗಳನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ.