ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆಂಬ ಆತ್ಮತೃಪ್ತಿ ಇದೆ : ಶಾಸಕ ಉಮಾನಾಥ್ ಕೋಟ್ಯಾನ್
ಪಡುಮಾರ್ನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ 9ಕೋ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ಮೂಡುಬಿದಿರೆ:ಜನಸೇವಕನಾಗಿ ಆರಿಸಿ ಬಂದು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇನೆಂಬ ಆತ್ಮತೃಪ್ತಿ ನನಗಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.
ಅವರು ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ.9ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮತ್ತು ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿ ಮಾತನಾಡಿದರು.
2013 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಾಗ ಧೃತಿಗೆಡದೇ ಸೋಲೇ ಗೆಲುವಿನ ಮೂಲವೆಂದು ತಿಳಿದು ಜನರ ಜೊತೆ ಸಂಪರ್ಕವನ್ನು ಇರಿಸಿಕೊಂಡಿದೆ. ನಂತರ 5 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಜನಸೇವಕನಾಗಿ ನಾನು ಆರಿಸಿ ಬಂದಿದ್ದೇನೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ಪಕ್ಷಭೇದ ಮರೆತು ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದರು.
ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿ.ಕೆ ಎಸ್ ಅಧ್ಯಕ್ಷತೆ ವಹಿಸಿದ್ದರು.
ಅಭಿವೃದ್ಧಿ ಕಾಮಗಾರಿಗಳು : ಲೋಕೋಪಯೋಗಿ ಇಲಾಖೆಯ ರೂ. 6 ಕೋಟಿ ವೆಚ್ಚದಲ್ಲಿ ಪಡುಮಾರ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಡೆಕ್ಕಲ್ ಪಾಡಿ ಮನೆಯಿಂದ ತಂಡ್ರಕೆರೆವರೆಗಿನ ಸೇತುವೆ ಅಭಿವೃದ್ಧಿ, ರೂ 10ಲಕ್ಷ ವೆಚ್ಚದಲ್ಲಿ ವೊಡಿಪಾರಬೆಟ್ಟು ರಸ್ತೆ ಅಭಿವೃದ್ಧಿ, ರೂ 12ಲಕ್ಷ ವೆಚ್ಚದಲ್ಲಿ ಬನ್ನಡ್ಕ -ಜನತಾ ಕಾಲೋನಿ ರಸ್ತೆ ಅಭಿವೃದ್ಧಿ, ರೂ 22 ಲಕ್ಷ ವೆಚ್ಚದಲ್ಲಿ ಒಡಿಪರಬೆಟ್ಟುವಿನಿಂದ ಅಚ್ಚರಕಟ್ಟೆ -ಅಮನಬೆಟ್ಟು ಸಂಪರ್ಕ ಸೇತುವೆ, ರೂ 10ಲಕ್ಷ ವೆಚ್ಚದಲ್ಲಿ ಕೆಂಪುಲು ರಸ್ತೆ ಅಭಿವೃದ್ಧಿ, ರೂ 25 ಲಕ್ಷ ವೆಚ್ಚದಲ್ಲಿ ಅಚ್ಚರಕಟ್ಟೆ ಎಲ್ಲೋಡಿ ರಸ್ತೆ ಅಭಿವೃದ್ಧಿ ಹಾಗೂ ಪರಗುತ್ತು ಬಳಿ 10 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ರೂ 5ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೆಂಗುರಿ ರಸ್ತೆ, 25 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಮುಂಗೋಡಿ ರಸ್ತೆ, 75ಲಕ್ಷ ವೆಚ್ಚದಲ್ಲಿ ತಂಡ್ರಕೆರೆ ಕಾಂಕ್ರಿಟ್ ರಸ್ತೆಗಳನ್ನು ಉದ್ಘಾಟಿಸಲಾಯಿತು.
ಪಂಚಾಯತ್ ಸದಸ್ಯರಾದ ವಾಸುದೇವ ಭಟ್, ಟೆಸ್ಲಿನಾ, ಮಲ್ಲಿಕಾ, ನಿತಿನ್, ಮಾಜಿ ಅಧ್ಯಕ್ಷರಾದ ದಯಾನಂದ ಪೈ, ಶ್ರೀನಾಥ್ ಸುವರ್ಣ, ಮಾಜಿ ಸದಸ್ಯ ಉಮೇಶ್, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್, ಪಕ್ಷದ ಪ್ರಮುಖರಾದ ಭವಿಷ್ಯತ್ ಕೋಟ್ಯಾನ್, ದಿವ್ಯ ವರ್ಮ ಬಲ್ಲಾಳ್, ಕಿಶೋರ್ ಕುಮಾರ್, ಗಣೇಶ್ ಪೆರ್ಮುಡಲ್, ಸತೀಶ್ ವೊಡಿಪ್ಪಾರಬೆಟ್ಟು, ಜನಾರ್ದನ ರಾವ್, ರಾಜೇಶ್ ಕೋಟ್ಯಾನ್ ಕೆಲ್ಲಪುತ್ತಿಗೆ, ಮೋಕ್ಷಿತ್ ಶೆಟ್ಟಿ ಮಾರ್ನಾಡು, ಊರಿನ ಹಿರಿಯರು ಈ ಸಂದರ್ಭದಲ್ಲಿದ್ದರು.
ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಹೆಗ್ಡೆ ವಂದಿಸಿದರು.