ಮೂಡುಬಿದಿರೆ: ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ

ಮೂಡುಬಿದಿರೆ: ಬಹು ವಿರಳವಾದ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರು ತಮಗೆ ಅನಿಸಿದ್ದನ್ನು, ಮನಸ್ಸಿಗೆ ಬಂದದನ್ನು ನೇರವಾಗಿ ಹೇಳುತ್ತಿದ್ದರಲ್ಲದೆ ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಬಿಟ್ಟು ಹೋದವರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.


ಅವರು ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ನಡೆದ 2023ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಪ್ರಭುತ್ವಕ್ಕೆ ತಲೆಬಾಗದೆ, ಕೃತಕ ಗಾಂಭೀರ್ಯದಿಂದ ದೂರ ಉಳಿದವರು ಕಾರಂತರು ಅವರನ್ನು ಜೀರ್ಣ ಮಾಡಿಕೊಳ್ಳುವುದು ಬಹಳ ಕಷ್ಟ ಎಂದು ವ್ಯಾಖ್ಯಾನಿಸಿದರು.

ಚಿಂತನಾಶೀಲ ಲೇಖಕರಾಗಿದ್ದ ಡಾಕ್ಟರ್ ಶಿವರಾಮ ಕಾರಂತರ ಹೆಸರಿನಲ್ಲಿ “ಶಿವರಾಮ ಕಾರಂತ ಪ್ರತಿಷ್ಠಾನ”ವು ಪ್ರತಿವರ್ಷವೂ ನೀಡುತ್ತಾ ಬಂದಿರುವ “ಶಿವರಾಮ ಕಾರಂತ ಪ್ರಶಸ್ತಿ”ಗಳನ್ನು ಖ್ಯಾತ ಕವಿಗಳು ಬರಹಗಾರರು ಆಗಿರುವ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು ಅವರಿಗೆ, ಖ್ಯಾತ ಜಾನಪದ ವಿದ್ವಾಂಸರು, ಸೃಜನಶೀಲ ಲೇಖಕರು ಆಗಿರುವ ಮೈಸೂರಿನ ಪ್ರೊಫೆಸರ್. ಕೃಷ್ಣಮೂರ್ತಿ ಹನೂರ ಅವರಿಗೆ, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಕೆ.ಪಿ. ರಾವ್ ಅವರಿಗೆ ಮತ್ತು ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ 75 ವರ್ಷಗಳ ಕಾಲ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಹೆಗ್ಗೋಡಿನ ನಿನಾಸಂ ಸಂಸ್ಥೆಗೆ “ಶಿವರಾಮ ಕಾರಂತ ಪ್ರಶಸ್ತಿ” ನೀಡಿ ಗೌರವಿಸಲಾಯಿತು.


ಕಳೆದ ಮೂರು ದಶಕಗಳಿಂದ ಕೃತಿಗಳನ್ನು ಆಧರಿಸಿ 10,000 ರೂಪಾಯಿ ಗೌರವ ಸಂಭಾವನೆಯೊಂದಿಗೆ ನೀಡುತ್ತಾ ಬಂದಿರುವ “ಶಿವರಾಮ ಕಾರಂತ ಪುರಸ್ಕಾರ’ವನ್ನು ಆತ್ಮಕಥನ ಹಾಡಾಗಿ ಹರಿದಾಳೆ ಕೃತಿಗಾಗಿ ಹೆಚ್ .ಆರ್. ಲೀಲಾವತಿ , ಅಂಬೇಡ್ಕರ್ ಮತ್ತು ಕೃತಿಗಾಗಿ ಪ್ರೊಫೆಸರ್.ಎಚ್.ಟಿ.ಪೋತೆ , ವಿನೂತನ ಕಥನ ಕಾರಣ ಕೃತಿಗಾಗಿ ಡಾ. ಬಿ.ಜನಾರ್ದನ ಭಟ್, ಮಾರ್ಗಾನ್ವೇಷಣೆ ಕೃತಿಗಾಗಿ ಡಾ.ನಿತ್ಯಾನಂದ ಬಿ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಕೆ ಶ್ರೀಪತಿ ಭಟ್, ಡಾ. ಎಂ ಮೋಹನ್ ಆಳ್ವ, ಉಪಸ್ಥಿತರಿದ್ದರು.

ಪ್ರತಿಷ್ಠಾನದ ಕೋಶಾಧಿಕಾರಿ ಕೆ.ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಡಾ. ಧನಂಜಯ ಕುಂಬ್ಳೆ, ವೇಣುಗೋಪಾಲ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು.

Related Posts

Leave a Reply

Your email address will not be published.