ನಗರೋತ್ಥಾನ ಯೋಜನೆಯಡಿ ಕಮಿಷನ್ ದಂಧೆ
ಮೂಡುಬಿದಿರೆ: ಇಲ್ಲಿನ ಪುರಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸರಕಾರದಿಂದ ರೂ 1 ಕೋಟಿ ಅನುದಾನ ಬಂದಿದ್ದು ಈ ಕಾಮಗಾರಿಯಲ್ಲಿ ಶೇ. 20ರಷ್ಟು ಕಮೀಷನ್ ವ್ಯವಹಾರ ನಡೆದಿದೆ ಎಂದು ವಿಪಕ್ಷೀಯ ಸದಸ್ಯ ಸುರೇಶ್ ಕೋಟ್ಯಾನ್, ಶಂಕ ವ್ಯಕ್ತಪಡಿಸಿ, ಆರೋಪಿಸಿದ ಘಟನೆ ನಡೆದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಆರೋಪಕ್ಕೆ ಸಾಕ್ಷಿ ಸಮೇತ ದಾಖಲೆ ನೀಡಿ ಆಗ ನಾವೂ ಬೆಂಬಲಿಸುತ್ತೇವೆ. ಸುಳ್ಳು ಆರೋಪ ಮಾಡಬೇಡಿ ದಾಖಲೆ ನೀಡುವಂತೆ ಪಟ್ಟು ಹಿಡಿದರು. ಈ ಬಗ್ಗೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಉತ್ತರಿಸಿದ ಪ್ರಸಾದ್ ಕುಮಾರ್ ನಗರೋತ್ಥಾನ ಅನುದಾನದ ಕಾಮಗಾರಿಯು ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ. ಅದು ಜಿಲ್ಲಾಧಿಕಾರಿಯವರ ಮೇಲುಸ್ತುವಾರಿಯಲ್ಲೇ ನಡೆಯುತ್ತಿದೆ. ಕಾಮಗಾರಿಯ ಬಗ್ಗೆ ಯಾರಿಗಾದರೂ ಸಂಶಯವಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಬಹುದೆಂದು ವಾದ ವಿವಾದಕ್ಕೆ ತೆರೆ ಎಳೆದರು.
ವಾರ್ಡ್ 15ರಲ್ಲಿ, ಕೆಲವು ಮನೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಅನಧಿಕೃತವಾಗಿ ನಡೆಸಲಾಗುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿ ಲಭಿಸದೆ ವಾಸ್ತವ್ಯದ ಪರವಾನಿಗೆ ಹೊಂದಿರುವ ಕಟ್ಟಡದಲ್ಲಿ ಆಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ ನವರು ಶೈಕ್ಷಣಿಕ ಉದ್ದೇಶಕ್ಕೆ ಕಟ್ಟಡ ಪರವಾನಿಗೆ ನೀಡಬೇಕೆಂದು ಕೋರಿರುವ ಅರ್ಜಿಯ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಾರ್ಡ್ ಸದಸ್ಯೆ ರೂಪಾ ಶೆಟ್ಟಿ, ಉತ್ತರಿಸಿ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಎಂದು ಹೇಳಿ ತನ್ನ ಆಕ್ಷೇಪ ಸಲ್ಲಿಸಿದರು. ವಾಸ್ತವ ವಿಷಯದ ಚಿತ್ರಣ ನೀಡಲು ತನಿಖಾಧಿಕಾರಿಯನ್ನು ನೇಮಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಕೊನೆಗೆ ಮುಖ್ಯಾಧಿಕಾರಿ ಇಂದು ಎಂ. ಅವರು ಈ ವಿಷಯದಲ್ಲಿ ಆಕ್ಷೇಪ ಸಲ್ಲಿಸುವ ಬಗ್ಗೆ ಪತ್ರಿಕೆ ಜಾಹೀರಾತಿನಲ್ಲಿ ಪ್ರಕಟವಾದ ದಿನಾಂಕವನ್ನು ಮುಂದಿನ ಮಾಸಿಕ ಸಭೆಯಲ್ಲಿ ಪ್ರಕಟಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಜಾತಾ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಇಕ್ಬಾಲ್ ಕರೀಂ, ದಿನೇಶ್ ಕುಮಾರ್ ಮಾರೂರು, ಸುರೇಶ ಕೋಟ್ಯಾನ್,ಕೊರಗಪ್ಪ, ಗಿರೀಶ್ ಕುಮಾರ್, ನವೀನ್ ಶೆಟ್ಟಿ, ಜಯಶ್ರೀ, ಜೊಸ್ಸಿ ಮಿನೇಜಸ್, ಪುರಂದರ ದೇವಾಡಿಗೆ ಮೊದಲಾದ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.