ಶೂನ್ಯ ತ್ಯಾಜ್ಯದೊಂದಿಗೆ ಕಂಬಳ, ಕಾಂತಾರ ಟೀಮ್ ಜನಾಕರ್ಷಣೆ : ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿಕೆ

ಮೂಡುಬಿದಿರೆ: ಡಿ.24ರಂದು ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುವ 20ನೇ ವರುಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವನ್ನು ಶೂನ್ಯ ತ್ಯಾಜ್ಯವಾಗಿ ಮತ್ತು ಕಾಂತಾರ ಸಿನೆಮಾ

ದೊಂದಿಗೆ ವಿಭಿನ್ನವಾಗಿ ಜನಾಕರ್ಷಣೆಯೊಂದಿಗೆ ನಡೆಸಲುದ್ದೇಶಿಸಲಾಗಿದೆ ಎಂದು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ್ ತಿಳಿಸಿದರು.

ಅವರು ಒಂಟಿಕಟ್ಟೆ ಕಡಲಕೆರೆ ಬಳಿಯ ಸೃಷ್ಟಿ ಗಾರ್ಡನ್ ಸಭಾಂಗಣದಲ್ಲಿ ಮಂಗಳವಾರ ಸಾಯಂಕಾಲ ನಡೆದ ಮೂಡುಬಿದಿರೆ ಕಂಬಳ ಸಮಿತಿಯ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಂತಾರ ಸಿನಿಮಾ ತಂಡ ಹಾಗೂ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಕರೆತರಲು ಪ್ರಯತ್ನ ನಡೆಸುತ್ತಿದ್ದೇವೆ. ವಿಶ್ವದ ವಿವಿಧ ರಾಷ್ಟ್ರಗಳ ಸಾವಿರಾರು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಸ್ಕೌಟ್-ಗೈಡ್ಸ್ ಜಾಂಬೂರಿಗೆ ಬರುವುದರಿಂದ ಮೂಡುಬಿದಿರೆ ಕಂಬಳವನ್ನು ವೀಕ್ಷಿಸಲಿದ್ದಾರೆ.

ಮೂಡುಬಿದಿರೆಯ ಕಂಬಳಕ್ಕೆ ಅದರದ್ದೇ ಆದಂತಹ ಘನತೆ ಗೌರವವಿದೆ. ಅತ್ಯಂತ ಶಿಸ್ತುಬದ್ಧವಾಗಿ ನಡೆಯುವ ಈ ಕಂಬಳ ಈ ಬಾರಿ `ಪರಿಸರ ಪ್ರೇಮಿಯಾಗಿ’ ಶೂನ್ಯತ್ಯಾಜ್ಯ ಕಂಬಳವಾಗಿ ನಡೆಸುವುದು ಮತ್ತೊಂದು ವಿಶೇಷ ಎಂದು ತಿಳಿಸಿದರು. ಗೊಂದಲ ರಹಿತವಾಗಿ, ಶಿಸ್ತುಬದ್ಧವಾಗಿ ಕಂಬಳ ನಡೆಯಲಿದೆ. ಸುವ್ಯವಸ್ಥಿತ ರೀತಿಯ ಪಾರ್ಕಿಂಗ್, ಗೊಂದಲಗಳಿಗೆ ಆಸ್ಪದವಿಲ್ಲದೆ, ಅತ್ಯಂತ ಜನಾಕರ್ಷಣೆಯ ಕೇಂದ್ರವಾಗಿ ಈ ಬಾರಿಯ ಕಂಬಳ ಮೂಡಿ ಬರುವುದರಲ್ಲಿ ಸಂದೇಹವೇ ಇಲ್ಲ ಎಂದರು.

ಪ್ರಧಾನ ಕಾರ್ಯದರ್ಶಿ ಗುಣಪಾಲ್ ಕಡಂಬ ಮಾತನಾಡಿ, ಮೂಡುಬಿದಿರೆ ಕಂಬಳ ಸಮಿತಿಗೆ ಹಿಂದೆ ಹತ್ತು ಎಕರೆ ಜಾಗವಿತ್ತು. ಆದರೆ ಈಗ 8.5 ಎಕರೆ ಜಾಗ ಮಾತ್ರ ಕಂಬಳ ಸಮಿತಿಯಲ್ಲಿದೆ. ಉಳಿದ 1.5 ಎಕರೆ ಜಾಗವನ್ನು ಪುನಃ ಸಮಿತಿಗೆ ಸೇರಿಸುವ ಪ್ರಯತ್ನಗಳಾಗಬೇಕಾಗಿದೆ. ಕಂಬಳ ಮ್ಯೂಸಿಯಂ ಸಹಿತ ಕಂಬಳಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವೃದ್ದಿ ಚಟುವಟಿಕೆಗಳು ಸಮಿತಿಯ ಮುಂದಿದೆ ಎಂದರು.

ಕೋಶಾಧಿಕಾರಿ ಭಾಸ್ಕರ್ ಎಸ್. ಕೋಟ್ಯಾನ್ ಮಾತನಾಡಿ, ಕೋಣಗಳನ್ನು ಕಟ್ಟಲು ಕರೆಯ ಬಳಿಯೇ ಸೂಕ್ತ ಜಾಗವನ್ನು ಕಾಯ್ದಿರಿಸಿದಲ್ಲಿ ಕೋಣಗಳನ್ನು ಬಿಡುವ ಸಂದರ್ಭ ತಡವಾಗುವುದನ್ನು ತಪ್ಪಿಸಬಹುದು. ಸಭಾ ಕಾರ್ಯಕ್ರಮಗಳನ್ನು ಚುಟುಕಾಗಿ ಮುಗಿಸುವಲ್ಲಿಯೂ ಗಮನಹರಿಸಬೇಕು ಎಂದರು.ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ, ಶೂನ್ಯ ತ್ಯಾಜ್ಯ ಕಂಬಳ ನಡೆಸುವ ನಿಟ್ಟಿನಲ್ಲಿ ಕಂಬಳಾಭಿಮಾನಿಗಳ ಸಹಕಾರ ಅಗತ್ಯ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು, ಶೂನ್ಯ ತ್ಯಾಜ್ಯ ಕಂಬಳ ನಡೆಸಲು ವ್ಯಾಪಾರಿಗಳು ಸಾಥ್ ನೀಡುವ ಭರವಸೆ ಇದೆ ಎಂದರು.ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಎಂ., ಸಮಿತಿಯ ಪ್ರಮುಖರಾದ ಸುನೀಲ್ ಆಳ್ವ, ಈಶ್ವರ್ ಕಟೀಲ್, ಕೆ.ಆರ್ ಪಂಡಿತ್, ಮೇಘನಾದ ಶೆಟ್ಟಿ, ಗೋಪಾಲ್ ಶೆಟ್ಟಿಗಾರ್, ಕೇಶವ ಕರ್ಕೇರ, ಕೆ.ಪಿ ಸುಚರಿತ ಶೆಟ್ಟಿ, ಧನಕೀರ್ತಿ ಬಲಿಪ ಉಪಸ್ಥಿತರಿದ್ದರು.

Related Posts

Leave a Reply

Your email address will not be published.