ಮೂಡುಬಿದಿರೆ : ಏಳೂವರೆ ಶತಮಾನಕ್ಕೂ ಮಿಕ್ಕಿದ ಇತಿಹಾಸವಿರುವ ಕೆರೆಗೀಗ ಪುನರುತ್ಥಾನದ ಸಂಭ್ರಮ
ಮೂಡುಬಿದಿರೆ: ಹದಿನೆಂಟು ಕೆರೆ, ಬಸದಿ,ದೇವಸ್ಥಾನಗಳು, ಕೇರಿಗಳು ಹೀಗೆ ಐತಿಹಾಸಿಕ ಮಹತ್ವವಿರುವ ಜೈನಕಾಶಿ, ಜ್ಞಾನಕಾಶಿ ಮೂಡುಬಿದಿರೆಯಲ್ಲಿ ಪ್ರಾಚೀನ ಕೆರೆಗಳದ್ದೇ ವಿಶೇಷತೆ. ಇದೀಗ ಬಹುಕಾಲದ ಕಾಯುವಿಕೆಯ ಬಳಿಕ ಶತಮಾನಗಳಿಂದ ಗಿಡಗಂಟಿಪೆÇದೆಗಳಲ್ಲಿ ಮರೆಯಾಗಿ ಹೂಳು ತುಂಬಿಕೊಂಡಿದ್ದ ದೊಡ್ಮನೆ ಶ್ರೀ ಚಂದ್ರಶೇಖರ ದೇವಸ್ಥಾನದ ಸುಂದರ ಕೆರೆ ಜೀಣೋದ್ಧಾರಕ್ಕೆ ತೆರೆದುಕೊಂಡಿದೆ.
ಇಲ್ಲಿನ ಪ್ರಾಂತ್ಯ ಗ್ರಾಮದ ದೊಡ್ಮನೆ ರಸ್ತೆ ಕೊನೆಯಲ್ಲಿರುವ ಶ್ರೀ ಚಂದ್ರಶೇಖರ ದೇವಸ್ಥಾನಕ್ಕೆ ಏಳೂವರೆ ಶತಮಾನಕ್ಕೂ ಮಿಕ್ಕಿದ ಇತಿಹಾಸವಿದೆ. ಈ ಪುರಾತನ ಶಿವಾಲಯ ಇಲ್ಲಿನ ಚೌಟರಸರ ಪ್ರಧಾನಿಗಳಾಗಿದ್ದ ದೊಡ್ಮನೆ ನರ್ಸಪ್ಪಯ್ಯ ಮನೆತನದವರ ಆರಾಧನಾ ಸನ್ನಿಧಿಯಾಗಿದೆ. ಆ ದಿನಗಳಲ್ಲಿ ಊರಿನ ಹದಿನೆಂಟು ಕೆರೆಗಳಲ್ಲಿ ಒಂದಾಗಿದ್ದ ಈ ದೊಡ್ಮನೆ ಕೆರೆಗೆ ಹೊಂದಿಕೊಂಡೇ ತೀರ್ಥ ಬಾವಿಯಾಗಿ ಇನ್ನೊಂದು ಪುಟ್ಟ ಕೆರೆಯಿರುವುದು ಲಿಂಗಾಯತ ಶೈಲಿಯ ಕೆರೆ ಇದು ಎನ್ನುವುದು ತಜ್ಞರ ಅಭಿಪ್ರಾಯ. ಅನತಿ ದೂರದಲ್ಲಿ ಕಾಲಗರ್ಭದಲ್ಲಿ ಧಾರ್ಮಿಕ ಇತಿಹಾಸವನ್ನೇ ಹುದುಗಿಸಿಕೊಂಡಿರುವ ಅಂಕಸಾಲೆಯ ಪರಿಸರದಲ್ಲೂ ಇಂತಹದ್ದೇ ಲಿಂಗಾಯತ ಶೈಲಿಯ ಮತ್ತೊಂದು ಕೆರೆಯಿತ್ತು ಎನ್ನುವುದಕ್ಕೆ ಕುರುಹುಗಳೂ ಇವೆ.
ಈಗಾಗಲೇ ರೋಟಾಲೇಕ್ ಅಭಿಯಾನದ ಮೂಲಕ ಮೂಡುಬಿದಿರೆಯ ಪ್ರಾಚೀನ ಕೆರೆಗಳ ಜತೆಗೆ ಜಲಮೂಲಗಳನ್ನು ಮರಳಿ ಅರಳಿಸುವ ಮೂಲಕ ಗಮನ ಸೆಳೆದಿರುವ ರೋಟರಿ ಚ್ಯಾರಿಟೇಬಲ್ ಟ್ರಸ್ಟ್ ಜತೆಗೆ ಸ್ಥಳೀಯರ ಮುತುವರ್ಜಿಯಿಂದ ಇಲ್ಲಿ ಜಲಮೂಲಗಳ ಸಂರಕ್ಷಣೆಯ ಅಸಕ್ತಿ ಬತ್ತಿಲ್ಲ. ಇದೀಗ ಐತಿಹಾಸಿಕ ದೊಡ್ಮನೆ ಕೆರೆಯ ಅಭಿವೃದ್ಧಿಯ ಆರ್ಥಿಕ ಭಾರಕ್ಕೆ ಊರ ಪರವೂರ ಭಕ್ತಾದಿಗಳು, ಪ್ರಜ್ಞಾವಂತರು, ಪರಿಸರಾಸಕ್ತರು ಖಂಡಿತಾ ಹೆಗಲು ನೀಡಿ ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸ ಕೆರೆ ಪುನರುತ್ಥಾನಕ್ಕೆ ಇಳಿದವರಲ್ಲಿದೆ.