ಮೂಡುಬಿದಿರೆ : “ಹೃದಯ ತಜ್ಞ ಮನೆ ಬಾಗಿಲಿಗೆ” – ಉಚಿತ ತಪಾಸಣಾ ಶಿಬಿರ
ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಕಾರ್ಡಿಯಾಲಜಿ ಡೋರ್‍ಸ್ಟೆಪ್ ಫೌಂಡೇಶನ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಹಾಗೂ ತಂಡದಿಂದ ಹೃದಯ ವೈಶಾಲ್ಯ ಯೋಜನೆ “ಹೃದಯ ತಜ್ಞ ಮನೆ ಬಾಗಿಲಿಗೆ” ಹೃದಯ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣಾ ಶಿಬಿರ ಮೂಡುಬಿದಿರೆ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ದ.ಕ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್ ಅವರು ಹೃದಯ ವೈಶಾಲ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿ ವೈದ್ಯಕೀಯ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೆ ಮನೆ ಬಾಗಿಲಲ್ಲೇ ಸಿಗಬೇಕೆನ್ನುವ ನಿಟ್ಟಿನಲ್ಲಿ ಹೃದಯ ವೈಶಾಲ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಅವರ ಚಿಂತನೆಯ ಈ ಯೋಜನೆಯಡಿ ಪ್ರತೀ ಬುಧವಾರ ತಜ್ಞ ವೈದ್ಯರು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಉಚಿತವಾಗಿ ತಪಾಸಣೆಯನ್ನು ನಡೆಸುತ್ತಾರೆ. ಹೃದಯ ವೈಶಾಲ್ಯ ಯೋಜನೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಜಾರಿ ತರಲಾಗಿದ್ದು, ಈ ಕುರಿತು ರಾಜ್ಯದ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಲಾಗಿದೆ ಎಂದು ಡಾ| ಕುಮಾರ್ ಹೇಳಿದರು.
ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೃದಯ ವೈಶಾಲ್ಯ ಯೋಜನೆ ಜಿಲ್ಲೆಗೆ ಮಾತ್ರ ಸೀಮಿತವಾಗದೇ, ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎನ್ನುವ ಆಶಯವಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಊರಿನ ಜನರು ಹಾಗೂ ಆರೋಗ್ಯಾಧಿಕಾರಿಗಳ ಮೇಲಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯೆ ಶ್ವೇತಾ ಕುಮಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್, ಮಂಗಳೂರು ತಾಲೂಕು ಆರೋಗ್ಯ್ಯಾಧಿಕಾರಿ ಸುಜಯ್, ಪುರಸಭಾ ಮುಖ್ಯಾಧಿಕಾರಿ ಶಿವ ನಾಯ್ಕ್, ನ್ಯಾಯವಾದಿ ಬಾಹುಬಲಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.