ಕೂಲಿ ಕಾರ್ಮಿಕನ ಜೀವ ಉಳಿಸಿ ಮಾನವೀಯತೆ ಮೆರೆದ ಆಂಬ್ಯುಲೆನ್ಸ್ ಚಾಲಕ

ಮೂಡುಬಿದಿರೆ: 41 ಘಂಟೆಗಳಲ್ಲಿ 2,700ಕಿ.ಮೀ. ಚಾಲನೆ ಮಾಡಿ ಅಸ್ವಸ್ಥ ಬಡ ಕೂಲಿ ಕಾರ್ಮಿಕನ ಜೀವ ಉಳಿಸಿ ಮಾನವೀಯತೆಯ ಸಾಹಸ ಮೆರೆದ ಐರಾವತ ಅಂಬುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ, ಚಾಲಕ ಮೂಡುಬಿದಿರೆಯ ಲಾಡಿ ನಿವಾಸಿ ಅಶ್ವತ್ಥ್ ಅವರನ್ನು ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಸೋಮವಾರ ಸಂಜೆ ಸಮ್ಮಿಲನ್ ಹಾಲ್ ನಲ್ಲಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿ ಮಂಗಳೂರು ಕೆ.ಎಂ.ಸಿಯ ಡಾ.ಮಧುಸೂಧನ್ ಉಪಾಧ್ಯ, ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಆರೀಫ್, ಕಾರ್ಯದರ್ಶಿ ಅವಿಲ್ ಡಿಸೋಜ , ವೃತ್ತಿ ಸೇವಾ ನಿರ್ದೇಶಕ ಮಹಮ್ಮದ್ ಶರೀಫ್, ಗಣೇಶ್ ಕಾಮತ್ ಎಂ, ಪ್ರಸಾದ್ ದೇವಾಡಿಗ ಉಪಸ್ಥಿತರಿದ್ದರು.

ಉತ್ತರ ಪ್ರದೇಶದ ಕೂಲಿ ಕಾರ್ಮಿಕ ಮಹಾಂದಿ ಹಸ್ಸನ್ ಮೂಡುಬಿದಿರೆ ಮಾಸ್ತಿಕಟ್ಟೆಯಲ್ಲಿ ಅಡಿಕೆ ದಾಸ್ತಾನು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮಾಡಿನಿಂದ ಆಕಸ್ಮಾತ್ ಕೆಳಗೆ ಬಿದ್ದು ಆಸ್ಪತ್ರೆ ಸೇರಿ ಕೋಮಾಕ್ಕೆ ಜಾರಿದ್ದ. ಒಡನಾಡಿಗಳ ಸಲಹೆಯ ಮೇರೆಗೆ ಆತನನ್ನು ಸ್ವಂತ ಊರಿಗೆ ಕಳುಹಿಸಲು ಯಜಮಾನರು ವಿಮಾನದ ಟಿಕೆಟ್ ತೆಗೆಸಿಕೊಟ್ಟರು. ವೈದ್ಯರಿಲ್ಲದೆ, ದಾದಿಯರಿಲ್ಲದೆ ರೋಗಿಯನ್ನು ಒಯ್ಯಲಾಗದು ಎಂದು ವಿಮಾನ ಯಾನ ಸಂಸ್ಥೆ ನಿರಾಕರಿಸಿದ್ದರಿಂದ ಮೂಡುಬಿದಿರೆಯ ಸಮಾಜ ಸೇವಕ ಐರಾವತ' ಆಂಬುಲೆನ್ಸ್ ಮಾಲಕ, ಮೂಡುಬಿದಿರೆಯ ಅನಿಲ್ ರೂಬನ್ ಮೆಂಡೋನ್ಸಾ ಅವರಲ್ಲಿ ಕೇಳಿ ಕೊಳ್ಳಲಾಯಿತು.ಇದಕ್ಕೆ ಸ್ಪಂದಿಸಿದ ಅನಿಲ್ ಅವರು ರೋಗಿಯ ಕಡೆಯವರ ಹೊಣೆಗಾರಿಕೆಯಲ್ಲಿ ಆಸ್ಪತ್ರೆಯವರು ನೀಡಿದ ಬಿಡುಗಡೆ ಪತ್ರ, ಆಮ್ಲಜನಕದ ಜಾಡಿ, ಪೊಲೀಸ್ ಠಾಣೆಯಿಂದ ಪಡೆದ ಪತ್ರ ಜತೆಗಿರಿಸಿಕೊಂಡು ಸ್ನೇಹಿತ ಅಶ್ವತ್ಥ್ ಎಂಬ ಇನ್ನೋರ್ವ ಚಾಲಕನನ್ನು ಕರೆದುಕೊಂಡು ಸೆ. 10ರ ಸಂಜೆ ಮೂಡುಬಿದಿರೆಯಿಂದ ಹೊರಟಿದ್ದರು. ಡೀಸೆಲ್ ತುಂಬಿಸುವಲ್ಲಿ ಹೊರತು ಪಡಿಸಿ ಎಲ್ಲೂ ವಾಹನ ನಿಲ್ಲಲಿಲ್ಲ. ಜಾಡಿ ಇರಿಸಿಕೊಂಡು ಸುಮಾರು 2,700 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮೊರಾದಾಬಾದ್‍ಗೆ ಕೇವಲ 41 ಗಂಟೆಗಳಲ್ಲಿ ಕರೆದೊಯ್ದಿದ್ದರು. ಸ್ವಲ್ಪ ಅಂದರೆ 20ರಿಂದ 30 ಕಿ.ಮೀ ದೂರದಷ್ಟು ಆಂಬುಲೆನ್ಸ್ ನ ಮಾಲಕನೇ ಚಾಲನೆಯನ್ನು ಮಾಡಿದ್ದು ನಂತರ ಅಶ್ವತ್ಥ್ ಅವರೇ ಅತೀ ವೇಗದಿಂದ
ಐರಾವತ’ ಆಂಬುಲೆನ್ಸ್‍ನ್ನು ಚಾಲನೆ ಮಾಡಿ ಆಸ್ಪತ್ರೆಗೆ ತಲುಪಿಸಿದ್ದರು .ಚಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು.