ಮೂಡುಬಿದಿರೆ : ದಸರಾ ಅಮೃತ ಮಹೋತ್ಸವಕ್ಕೆ ಚಾಲನೆ

ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ವತಿಯಿಂದ ಸಮಾಜ ಮಂದಿರದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಲಾಪಗಳೊಂದಿಗೆ ನಡೆಯಲಿರುವ 75ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯಿಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾನು ಇಂದು ಏನಾಗಿದ್ದೇನೆ ಅದು ಸಾಹಿತ್ಯ ಇರಬಹುದು ಸಾಂಸ್ಕೃತಿಕ ವ್ಯಕ್ತಿ ಇರಬಹುದು ಅಥವಾ ರಾಜಕೀಯದಲ್ಲಿ ಒಂದು ಸ್ಥಾನ ಪಡೆಯಲು ಗಂಗಾಮೂಲ ಯಾವುದೆಂದರೆ ಅದು ಈ ಸಮಾಜ ಮಂದಿರ ಸಭಾ ಮತ್ತು ಸರಸ್ವತಿ ಕೇಂದ್ರ. ಸಣ್ಣ ವಯಸ್ಸಿನಲ್ಲಿ ಇಲ್ಲಿ ನಡೆಯುತ್ತಿದ್ದ ಯಾವುದೇ ಕಾರ್ಯಕ್ರಮಗಳಿಗೆ ತಪ್ಪಿಸುತ್ತಿರಲಿಲ್ಲ ನಾನು. ನಾನಿಂದು ವೀರಪ್ಪ ಮೊಯಿಲಿ ಆಗಲು ಸಮಾಜ ಮಂದಿರದ ಪಾತ್ರ ಸಿಂಹಪಾಲು ಇದೆ. ಇಲ್ಲಿ ನಾನು ನಾಟಕ, ಯಕ್ಷಗಾನವನ್ನು ಆಡಿದ್ದೇನೆ. ಇಲ್ಲಿ ಅಭಯಚಂದ್ರರು ನನ್ನನ್ನು ಕರೆದು ಸನ್ಮಾನಿಸಿದ್ದಾರೆ.ಮೋಹನ ಆಳ್ವರ ಜತೆಗೆ ಸನ್ಮಾನ ಸಂತಸ ನೀಡಿದೆ. ಇದರಲ್ಲಿ ತನ್ಮಯತೆ ಇದೆ ಧನ್ಯತಾ ಭಾವವಿದೆ.

ಮೂಡುಬಿದಿರೆ ಜೈನ ಧರ್ಮದ ಸಹಿಷ್ಣುತೆಗೆ ಹೆಸರಾದುದು. ಯಾವಾಗಲೂ ಪ್ರತಿಯೊಂದು ಜೀವಿಗೂ ಪರಿಪೂರ್ಣತೆ ಎನ್ನುವ ದೈವತ್ವವನ್ನು ಹೊಂದುವ ಸಾಮ್ಯತೆ ಇದೆ ಎನ್ನುವ ತತ್ವಕ್ಕೆ ಹೊಂದಿಕೆಯಾಗುವಂತಹ ಜೈನ ಧರ್ಮದ ಮೌಲ್ಯಗಳಿವೆ ಎಂದ ಅವರು ಸತ್ಯದ ಶೋಧನೆಗೆ ಮನಸು ಕೊಟ್ಟಾಗ ಹೆಚ್ಚಿನ ಸಾಧನೆಗಳನ್ನು ಮಾಡಲು ಸಾಧ್ಯವಿದೆ ಹಾಗೂ ಭವಿಷ್ಯತ್ತಿನ ಕಡೆಗೆ ನಮ್ಮ ದೃಷ್ಠಿ ಇರಬೇಕಾಗುತ್ತದೆ ಎಂದರು.ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸಾಧಕರಾದ ಡಾ. ವೀರಪ್ಪ ಮೊಯಿಲಿ, ಡಾ. ಮೋಹನ ಆಳ್ವರಿಗೆ ಸಮಾಜ ಮಂದಿರ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಶರಸೇತು ಬಂಧ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಜಯಶ್ರೀ ಅಮರನಾಥ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಸಮಾಜ ಮಂದಿರ ಸಭಾದ ಸಂಚಾಲಕ ಡಾ.ಪುಂಡಿಕೈ ಗಣಪಯ್ಯ ಭಟ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಗಣೇಶ್ ಕಾಮತ್ ಸನ್ಮಾನ ಪತ್ರವನ್ನು ವಾಚಿಸಿದರು.

Related Posts

Leave a Reply

Your email address will not be published.