ಮೂಡುಬಿದಿರೆಯ ಬನ್ನಡ್ಕದಲ್ಲಿ ಸ್ಥಾಪಿಸಿರುವ ವಿಶ್ವವಿದ್ಯಾಲಯ ಕಾಲೇಜು ಉದ್ಘಾಟನೆ

ಮೂಡುಬಿದಿರೆ : ನಮ್ಮ ಸಮಾಜದಲ್ಲಿರುವ ಎಲ್ಲಾ ಸಮಸ್ಯೆಗೂ ಪರಿಹಾರ ಗುಣಮಟ್ಟದ ಶಿಕ್ಷಣ. ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಸದೃಢವಾದ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಸರಕಾರವು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.

ಅವರು ವಿವಿ ಕಾಲೇಜು ಬನ್ನಡ್ಕ ಇದರ ಉದ್ಘಾಟನೆ ಮತ್ತು ಪ್ರತಿಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮೂಡುಬಿದಿರೆಗೆ ಈ ಪದವಿ ಕಾಲೇಜನ್ನು ಇಲ್ಲಿಗೆ ತರಲು ಶಾಸಕ ಉಮಾನಾಥ ಕೋಟ್ಯಾನ್ ಅವರ ಅವಿರತ ಪರಿಶ್ರಮವಿದೆ ಅವರ ಶ್ರಮಕ್ಕೆ ನಾವು ಸಹಕಾರ ನೀಡಿದ್ದೇವೆ. ಯುವಕ ಯುವತಿಯರಿಗೆ ಉದ್ಯೋಗ ಸಿಗಬೇಕಾದರೆ ಇಲ್ಲಿ ವಿದ್ಯಾವಂತರ, ಪ್ರತಿಭಾವಂತರ ಕೊರತೆ ಇದೆ. ಪ್ರತಿಭೆ ಇದ್ದರೆ ಮಾತ್ರ ನಿಮ್ಮ ಕನಸಿನ ಉದ್ಯೋಗದೊಂದಿಗೆ ಪ್ರಗತಿ ಮತ್ತು ಸಮೃದ್ಧಿಯನ್ನು ಕಾಣಲು ಸಾಧ್ಯವಿದೆ. ಆದ್ದರಿಂದ ಉತ್ತಮ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
ಮಂಗಳೂರು ವಿವಿಯ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷೆ ಕಲ್ಯಾಣಿ ಸಿ.ಎಸ್, ಪಡುಮಾರ್ನಾಡು ಹಾಲು ಉತ್ಪಾದಕರ ಸಂಘದ ದಯಾನಂದ ಪೈ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಳೂರು ವಿವಿಯ ಕುಲ ಸಚಿವ ಪ್ರೊ. ಕಿಶೋರ್ ಕುಮಾರ್ ಸ್ವಾಗತಿಸಿದರು.ಶಾಸಕ ಉಮಾನಾಥ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಯ ಕಾಲೇಜು ಬನ್ನಡ್ಕ ಡಾ.ಗಣಪತಿ ಗೌಡ ವಂದಿಸಿದರು.