ಮೂಡುಬಿದರೆ: ನ.10ರಂದು ಕಿಸಾನ್ ಸಂಘದಿಂದ ಬೃಹತ್ ಹಕ್ಕೊತ್ತಾಯ ಜಾಥಾ
ಮೂಡುಬಿದಿರೆ: ದ.ಕ ಜಿಲ್ಲೆಯ ರೈತರಿಗೆ ಕುಮ್ಕಿ ಹಕ್ಕಿಗೆ ಆತನೇ ಹಕ್ಕುದಾರನೆಂದು ಘೋಷಿಸಿ ಹಕ್ಕುಪತ್ರವನ್ನು ನೀಡಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸಬೇಕೆಂದು ಒತ್ತಾಯಿಸಿ ನ.10 ರಂದು ಮೂಡುಬಿದಿರೆ ತಾಲೂಕಿನಾದ್ಯಾಂತ ರೈತರ ಬೃಹತ್ ಹಕ್ಕೊತ್ತಾಯ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ದ.ಕ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಜಾಥದಲ್ಲಿ ಮೂಡುಬಿದಿರೆಯ 25 ಗ್ರಾಮಗಳ ಎಲ್ಲಾ ರೈತ ಪ್ರಮುಖರು ಭಾಗವಹಿಸಲಿದ್ದು, ಸಮಾಜ ಮಂದಿರದಿಂದ ಪ್ರಾರಂಭಗೊಂಡು ಮೂಡುಬಿದಿರೆ ಹೊಸ ಬಸ್ ನಿಲ್ದಾಣದಿಂದ ಅಮರಶ್ರೀ ಟಾಕೀಸ್ ಮೂಲಕ ಹಳೆ ಪೊಲೀಸ್ ಠಾಣೆಯಿಂದ ತಾಲೂಕು ಕಛೇರಿಯನ್ನು ತಲುಪಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಕುಮ್ಕಿ ವ್ಯಾಪ್ತಿಗೊಳಪಟ್ಟ ಎಲ್ಲಾ ಸರಕಾರಿ ಜಮೀನನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ತೆಗೆದು, ಡೀಮ್ಡ್ ಫಾರೆಸ್ಟ್ ಕಾನೂನನ್ನು ಸಂಪೂರ್ಣ ರದ್ದುಗೊಳಿಸಬೇಕು. ಅದನ್ನು ಸಂಪೂರ್ಣವಾಗಿ ತೆಗಿಯುವವರೆಗೂ ರೈತರ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಇದರೊಂದಿಗೆ ರೈತರಿಗೆ ಕುಮ್ಕಿ ಹಕ್ಕನ್ನು ಘೋಷಿಸಲಾಗುವುದೆಂದು ಹೇಳಲಾಗಿದ್ದು, ಆದರೆ ಇದನ್ನು ವಿಧಾನಸಭೆಯಲ್ಲಿ ಘೋಷಿಸಲಾಗಿದ್ದು, ಆದರೆ ವಿಧಾನಪರಿಷತ್ತಿನಲ್ಲಿ ಇದುವರೆಗೂ ಕಡ್ಡಾಯವಾಗಿ ಅನುಮೋದನೆ ಸಿಕ್ಕಿಲ್ಲ ಎಂದ ಅವರು ಹೋರಾಟವನ್ನು ಜಿಲ್ಲೆಯಲ್ಲಿ ಮೂಡುಬಿದಿರೆಯಿಂದ ಆರಂಭಿಸಿ, ನಂತರ ಪ್ರತೀ ತಾಲೂಕಿನಲ್ಲಿ ರೈತರ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಉಪಾಧ್ಯಕ್ಷ ವಲೇರಿಯನ್ ಕುಟಿನ್ಹಾ, ತಾ.ಪ್ರಧಾನ ಕಾರ್ಯದರ್ಶಿ ವಸಂತ್ ಭಟ್, ತಾ.ಸಂ.ಕಾರ್ಯದರ್ಶಿ ಸುಖಾನಂದ ಶೆಟ್ಟಿ, ಕಾರ್ಯಕಾರಿ ಸದಸ್ಯ ಜೋಯ್ಲಸ್ ಡಿ’ಸೋಜಾ ತಾಕೋಡೆ, ಮಾರ್ಪಾಡಿಯ ಘಟಕಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಶಿರ್ತಾಡಿಯ ಘಟಕಾಧ್ಯಕ್ಷ ಜಯಾನಂದ ಶೆಟ್ಟಿ, ಇರುವೈಲಿನ ಘಟಕಾಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.