ಮೂಡುಬಿದಿರೆ:ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ
ಮೂಡುಬಿದಿರೆ: ‘ಆಧುನಿಕ ಜಗತ್ತಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಗತ್ಯ’ ಎಂದು ಭಾರತ ಸರ್ಕಾರದ ಆಯುಷ್ ಸಚಿವಾಲಯದ ನಿರ್ದೇಶಕ ಡಾ. ರಾಘವೇಂದ್ರ ರಾವ್ ಹೇಳಿದರು.
ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.
ಕಳೆದ ಹಲವು ದಶಕಗಳಿಂದ ಅಸಾಂಕ್ರಾಮಿಕ ರೋಗಗಳು ಇಡೀ ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಕಂಡುಬAದಿದೆ. ಈ ನಿಟ್ಟಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯರು ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಡೆಸಿ ಸಮಾಜದ ಆರೋಗ್ಯಕ್ಕಾಗಿ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಯೋಗವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಯ ಸಂಶೋಧನೆ ಮತ್ತು ನೋಡಲ್ ಅಧಿಕಾರಿ, ಡಾ. ವಾದಿರಾಜ್ ಮಾತನಾಡಿ, ನಿರಂತರ ವೈದ್ಯಕೀಯ ಶಿಕ್ಷಣ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲೂ ನಡೆಯಬೇಕು. ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮಹತ್ವವನ್ನು ಸಮಾಜಕ್ಕೆ ತಿಳಿಸಿ ಕೊಡುವಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕು. ಇಂತಹ ಕಾರ್ಯಕ್ರಮಗಳಿಂದ ನಮ್ಮ ತತ್ವಶಾಸ್ತ್ರಗಳನ್ನು ಅಡಿಪಾಯವಾಗಿಟ್ಟುಕೊಂಡು ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಗತಿ ಕಾಣಲು ಬಹಳ ಉಪಯುಕ್ತ ಮಾಹಿತಿಗಳು ದೊರೆಯುತ್ತವೆ ಎಂದು ಹೇಳಿದರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ವೈದ್ಯರು ಹೇಗೆ ಸಾಮಾಜಿಕ ಕಳಕಳಿಯೊಂದಿಗೆ ಸದೃಢ ಸಮಾಜ ಮತ್ತು ಆರೋಗ್ಯಕ್ಕಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಡಾ. ರಾಘವೇಂದ್ರ ರಾವ್ ಮತ್ತು ಡಾ. ವಾದಿರಾಜ್ ಅವರನ್ನು ಆಳ್ವಾಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಡಾ. ಶಾಲಿನಿ ನಿರೂಪಿಸಿದರು. ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ ಸ್ವಾಗತಿಸಿದರು. ಡಾ ಅರ್ಚನಾ ಇದ್ದರು.