ಮೂಡುಬಿದಿರೆ: ವಿದ್ಯಾರ್ಥಿಗಳು ಸಂಶೋಧನಾ ಕೃತಿಗಳಿಂದ ಪ್ರೇರಣೆಗೊಳಗಾಗಬೇಕು – ಡಾ.ಕುರಿಯನ್

ವಿದ್ಯಾರ್ಥಿಗಳು ಸಂಶೋಧನಾ ಕೃತಿಗಳಿಂದ ಪ್ರೇರಣೆಗೊಳಗಾಗಬೇಕು: ಡಾ.ಕುರಿಯನ್
ಮೂಡುಬಿದಿರೆ: ಸಾಹಿತ್ಯ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಸ್ಫೂರ್ತಿಗೊಳಗಾಗುವಂತೆ, ಸಂಶೋಧನಾ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಪ್ರೇರಣೆಗೊಳಗಾಗಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿಪ್ರಾಯ ಪಟ್ಟರು.

ಅವರು ಆಳ್ವಾಸ್ ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ.ಜಿ.ಯವರ ‘ಉದ್ದ ಲಂಗದ ಕಾಲೇಜು ದಿನಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಾವು ಅನೇಕ ಸಂಕ್ರಮಣ ಕಾಲಘಟ್ಟವನ್ನು ದಾಟಿ ಬಂದಿದ್ದೆವೆ. ಪ್ರಸ್ತುತ ಸಮಾಜ ‘ನಿರ್ಧರಿತ ಆರ್ಥಿಕತೆ’ ಯಿಂದ ಬದಲಾಗಿ ‘ಆರ್ಥಿಕತೆ ನಿರ್ಧರಿತ ಸಮಾಜ’ವಾಗಿ ಬದಲಾಗುತ್ತಿದೆ. ಇದರಿಂದಾಗಿ, ಪ್ರತಿಯೊಂದು ವಿಷಯವು ಹಣಕಾಸಿನ ಆಧಾರದ ಮೇಲೆ ನಿರ್ಧರಿತವಾಗುತ್ತಿದೆ. ಹಿಂದಿನ ತಲೆಮಾರಿನವರು ಒತ್ತಡ ರಹಿತ ನಿರಾಳತೆಯ ಜೀವನ ನಡೆಸಿದ್ದು, ಪ್ರಸ್ತುತ ಯುವಜನತೆ ಸ್ಪಷ್ಟತೆಯನ್ನು ಹೊಂದಿದ್ದರೂ, ಒತ್ತಡದ ಜೀವನ ನಿರ್ವಹಿಸುವಂತಾಗಿದೆ. ಹಿಂದಿನ ತಲೆಮಾರಿನವರಲ್ಲಿ ‘ಬಳಸಿ ಬಿಸಾಡುವ’ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಪರಿಸರ ಸಂರಕ್ಷಣೆ ಸಮಸ್ಯೆಯಾಗಿ ಕಾಣಿಸಿಕೊಂಡಿರಲಿಲ್ಲ ಎಂದರು. ವಿದ್ಯಾರ್ಥಿಗಳು ಜೀವಪರ ಕಾಳಜಿಹೊಂದಿ ಸಂವೇದನಾಶೀಲ ನಡೆಯನ್ನು ಅನುಭವಿಸಲು ಸಾಹಿತ್ಯವನ್ನು ಓದಬೇಕು ಎಂದರು.
ಬಿಸಿನೆಸ್ ಮ್ಯಾನೆಜ್‌ಮೆಂಟ್ ವಿಭಾಗದ ಉಪನ್ಯಾಸಕ ಮನು ಅವರು ಕೃತಿ ಪರಿಚಯಿಸಿದರು. ಲೇಖಕ ಹರೀಶ್ ಟಿಜಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಕಾಲೇಜಿನ ಪರಿಕ್ಷಾಂಗ ಕುಲಸಚಿವ ಡಾ. ನಾರಾಯಣ ಶೆಟ್ಟಿ, ಆಡಳಿತ ಕುಲಸಚಿವ ಡಾ.ರವೀಂದ್ರನ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಉಪನ್ಯಾಸಕಿ ಅಪರ್ಣ ಪ್ರಾರ್ಥಿಸಿದರು. ವಿದ್ಯಾರ್ಥಿ ಶಶಾಂಕ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
