ಮೌಲಾನಾ ಅಝಾದ್ ಮಾದರಿ ಶಾಲಾ ಕಟ್ಟಡ ಉದ್ಘಾಟನೆ : ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಮಹತ್ವ ನೀಡುವ ನಿಟ್ಟಿನಲ್ಲಿ ಕ್ರಮ ಮಾದರಿ ಶಾಲೆ

ಶಿಕ್ಷಣ ಎಂಬುದು ಬದುಕಿಗೆ ಬೆಳಕು ನೀಡುವ ಕ್ಷೇತ್ರವಾಗಿದೆ. ಅಲ್ಪ ಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೌಲಾನಾ ಅಝಾದ್‍ನಂತಹ ಮಾದರಿ ಶಾಲೆಗಳನ್ನು ಸ್ಥಾಪಿಸಿ ಮುನ್ನಡೆಸುತ್ತಿದೆ ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು , ಪುತ್ತೂರು ನಗರದ ಪಡೀಲ್‍ನಲ್ಲಿ ರೂ. 2.35 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಮೌಲಾನಾ ಆಝಾದ್ ಮಾದರಿ ಶಾಲಾ ಕಟ್ಟಡವನ್ನು ಸಚಿವ ಎಸ್.ಅಂಗಾರ ಅವರು ಉದ್ಘಾಟಿಸಿದರು.

ತದ ಬಳಿಕ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ 8 ಶಾಲೆಗಳಿದ್ದು, 2400 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರವು ಇಂತಹ ಶಾಲೆಗಳನ್ನು ಸ್ಥಾಪಿಸಿ ಮುನ್ನಡೆಸುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟವೆನಿಸಿರುವ ಭಾರತದಲ್ಲಿನ 130 ಕೋಟಿ ಜನರು ದೇಶಕ್ಕಾಗಿ ಬದುಕಬೇಕು. ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ರಾಷ್ಟ್ರಾಭಿಮಾನ ಮೂಡಿಸುವ ಶಿಕ್ಷಣ ಸಿಗಬೇಕು. ಇದೀಗ ಮೌಲಾನಾ ಆಝಾದ್ ಹೆಸರಿನಲ್ಲಿ ಶಾಲೆಯನ್ನು ಸರ್ಕಾರ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಎಪಿಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ಸರ್ಕಾರಿ ಮಾದರಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಎಸ್. ಅಂಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‍ಎಸ್‍ಎಲ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳನ್ನು ಸಚಿವ ಅಂಗಾರ ಮತ್ತು ಶಾಸಕ ಸಂಜೀವ ಮಠಂದೂರು ಅವರು ಸನ್ಮಾನಿಸಿ ಗೌರವಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ತಹಸೀಲ್ದಾರ್ ನಿಸರ್ಗಪ್ರಿಯ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ದ.ಕ.ಜಿಲ್ಲಾ ಅಧಿಕಾರಿ ಅಂಜನಪ್ಪ ಎಸ್, ತಾಲೂಕು ವಿಸ್ತರಣಾಧಿಕಾರಿ ವೀರಭದ್ರಪ್ಪ ಬಿ.ಎಸ್, ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ,ಶಾಲಾ ಮುಖ್ಯಗುರು ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು.