ಮೂಡುಬಿದರೆ : ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಸಮಾವೇಶ

ಮೂಡುಬಿದಿರೆ: ಸಂಸ್ಕೃತಿ, ಪರಂಪರೆ, ಇತಿಹಾಸ ಇವೆಲ್ಲದಕ್ಕೂ ಮಾದರಿಯಾಗಿ ಭಾರತ ಮೆರೆಯುತ್ತಿದೆ. ಕಾಂಗ್ರೆಸ್‍ನದ್ದು ವಿದೇಶಿ ಸಿದ್ದಾಂತ. ರಾಷ್ಟ್ರೀಯತೆಯನ್ನು ಮರೆತು ವಿದೇಶಿ ಸಂಸ್ಕೃತಿಯೊಂದಿಗೆ ಕಾಂಗ್ರೆಸ್ ಸಾಗಿ ಬಂದಿರುವುದರಿಂದ ಇಂದು ನೆಲಕಚ್ಚಿದೆ. ಅಭಿವೃದ್ಧಿಯ ಜೊತೆಗೆ ರಾಷ್ಟ್ರೀಯತೆ ಮೌಲ್ಯಗಳ ಸಿದ್ಧಾಂತಕ್ಕೆ ಅನುಗುಣವಾಗಿ ಮುನ್ನಡೆಯುತ್ತಿರುವ ಬಿಜೆಪಿ ಇಂದು ವಿಶ್ವದಲ್ಲೇ ನಂ.1 ಪಕ್ಷಗಾಗಿ ಗುರುತಿಸಿಕೊಂಡಿದೆ ಎಂದು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಹೇಳಿದರು.

ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸ್ವರಾಜ್ಯ ಮೈದಾನದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ, ಯು.ಟಿ ಖಾದರ್ ಅವರ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿದೆ. ಹಿಂದುಳಿದ ವರ್ಗದವರು ಸಹಿತ ವಿವಿಧ ವರ್ಗಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅವಿರತ ಶ್ರಮಿಸಿದೆ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಅವರು ರೂ 2000 ಕ್ಕೂ ಹೆಚ್ಚಿನ ಅನುದಾನವನ್ನು ತಂದು ವಿಶೇಷವಾದ ಅಭಿವೃದ್ಧಿಯ ಶಕೆ ಅರಂಭಿಸಿರುವುದಕ್ಕೆ ಶಾಸಕ ಕೋಟ್ಯಾನ್ ಅವರನ್ನು ಸುದರ್ಶನ್ ಅವರು ಅಭಿನಂದಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಸಮಾವೇಶವನ್ನು ಉದ್ಘಾಟಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕೇವಲ 5 ವರ್ಷಗಳಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್ 2 ಸಾವಿರ ಕೋಟಿ ಅಧಿಕ ಅನುದಾನಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಆದರೆ ಅಭಯಚಂದ್ರ ಜೈನ್ ಅವರೇ ನಿಮ್ಮ 20 ವರ್ಷಗಳ ಶಾಸಕ ಅವಧಿಯಲ್ಲಿ ಮಾಡಿರುವ ಕೆಲಸ ಏನು?. ಇಟಲಿ, ಬ್ರಿಟನ್, ಪಾಕಿಸ್ತಾನದ ಡಿಎನ್‍ಎ ಕಾಂಗ್ರೆಸ್ಸಿನವರದ್ದು.ದೇಶದೆಲ್ಲೆಡೆ ಇರುವ ಬಿಜೆಪಿ ಕಾರ್ಯಕರ್ತ ಡಿಎನ್‍ಎ ಅದು ಹಿಂದುತ್ವ ಮಾತ್ರ ಎಂದರು.

ಮಂಗಳೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ವಿಧಾನಪರಿಷತ್ ಸದಸ್ಯ ಪ್ರತಾಪ್‍ಸಿಂಹ ನಾಯಕ್,ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ವಿಠಲ ಪೂಜಾರಿ, ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ರಾಮ್‍ದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ, ಮೋರ್ಚಾ ಸಮಾವೇಶಗಳ ಸಂಚಾಲಕ ಈಶ್ವರ್ ಕಟೀಲ್, ಸಹಸಂಚಾಲಕ ಸಂದೇಶ್ ಶೆಟ್ಟಿ, ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ, ಒಬಿಸಿ ಮಂಡಲ ಅಧ್ಯಕ್ಷ ರಾಜೇಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.