ಮೂಡುಬಿದಿರೆ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂಡುಬಿದಿರೆ: ಎರಡು ವಾರದ ಹಿಂದೆ ಬೆಳ್ತಂಗಡಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರೂರಿನ ಗುಡ್ಡ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಬರಮೇಲು ಮನೆಯ ಆನಂದ ಮೂಲ್ಯ (57) ಎಂಬವರ ಮೃತದೇಹ ಎಂದು ಗುರುತಿಸಲಾಗಿದೆ. ಆನಂದ ಮೂಲ್ಯ ಅವರು ಕುಕ್ಕೇಡಿ ಗ್ರಾಮ ಪಂಚಾಯತ್ ಬಳಿಯಲ್ಲಿರುವ ಹೊಟೇಲೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದರು. ಡಿ.3ರಂದು ಬೆಳಿಗ್ಗೆ ಎಂದಿನಂತೆ ಹೊಟೇಲ್ ಗೆ ಕೆಲಸಕ್ಕೆಂದು ಹೋಗಿದ್ದವರು ನಂತರ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಚಂದ್ರಾವತಿ ಅವರು ವೇಣೂರು ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಮೂಡುಬಿದಿರೆ ಠಾಣಾ ವ್ಯಾಪ್ತಿಯ ಮಾರೂರು ಬಳಿಯ ಗುಡ್ಡದಲ್ಲಿ ಭಾನುವಾರದಂದು ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಅದು ಆನಂದ ಮೂಲ್ಯ ಅವರದೇ ಮೃತದೇಹವೆಂದು ಮನೆಯವರು ಗುರುತಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
