ಮೂಡುಬಿದಿರೆ : ಗುಡ್ಡ ಕುಸಿದ ಸ್ಥಳಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಭೇಟಿ
ಮೂಡುಬಿದಿರೆ: ಪಾಲಡ್ಕ – ಕಲ್ಲಮುಂಡ್ಕೂರು ಕೂಡು ರಸ್ತೆಯ ಗುಂಡ್ಯಡ್ಕ ಎಂಬಲ್ಲಿ ವಿಪರೀತ ಮಳೆಯಿಂದಾಗಿ ಶನಿವಾರ ರಸ್ತೆಯ ಬದಿಯಲ್ಲಿದ್ದ ಗುಡ್ಡ ಜರಿದು ಬಿದ್ದು, ಜನರು ನಡೆದಾಡುವ ಹಾಗೂ ವಾಹನ ಸಂಚರಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದ ಸ್ಥಳಕ್ಕೆ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಭಾನುವಾರ ಭೇಟಿ ನೀಡಿದರು.
ಗುಂಡ್ಯಡ್ಕದಲ್ಲಿ ಎಲ್ಲಾ ಮನೆ ವಿದ್ಯುತ್ ಸಂಪರ್ಕ ಕಡಿದು ಹೋಗಿರುವ ಬಗ್ಗೆ ಮಾಹಿತಿಯನ್ನು ಪಡೆದ ಜೈನ್ ತಕ್ಷಣವೇ ಸಂಬಂಧಪಟ್ಟ ಮೆಸ್ಕಾಂ ಹಾಗೂ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಿ, ಈ ಕೂಡಲೇ ದುರಸ್ತಿ ಮಾಡಿ ಜನರಿಗಾದ ತೊಂದರೆಗಳನ್ನು ಸರಿಪಡಿಸುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಪಾಲಡ್ಕ ಪಂಚಾಯತ್ ಉಪಾದ್ಯಕ್ಷ ಪ್ರವೀಣ್ ಸಿಕ್ವೇರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಲೇರಿಯನ್ ಸಿಕ್ವೇರಾ, ಸ್ಥಳೀಯರಾದ ಆಂಡ್ರ್ಯೂ ಡಿಸೋಜಾ, ವಾಸುದೇವ ನಾಯಕ್, ಮ್ಯಾಕ್ಸಿಂ ಲೋಬೊ, ರಾಘವೇಂದ್ರ ಭಟ್, ಸುಧೀರ್ ಭಟ್, ವಾಸುದೇವ ಭಟ್, ಉದಯ ಶೆಟ್ಟಿ, ಪ್ರಮೋದ್ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಪಾಲಡ್ಕ ಗ್ರಾಮದಲ್ಲಿ ಮಾಡುತ್ತಿರುವ ವ್ಯವಸಾಯಕ್ಕೆ, ಗುಂಡ್ಯಡ್ಕ ಗ್ರಾಮದ ಅಣೆಕಟ್ಟಿನಿಂದ ನೀರು ಬರುವ ತೊಂದರೆಯನ್ನು ಮಾಜಿ ಸಚಿವರಲ್ಲಿ ತಿಳಿಸಿದಾಗ ಇದಕ್ಕೆ ಸ್ಥಳದಲ್ಲೇ ಸ್ಪಂದಿಸಿ, ಕೃಷಿ ಸಚಿವರಲ್ಲಿ ಮಾತಾಡಿ ಅದಕ್ಕೆ ಬೇಕಾದ ಅನುದಾನವನ್ನು ಕೂಡಲೇ ಮಾಡಿಕೊಡುವುದಾಗಿ ಭರವಸೆ ಕೊಟ್ಟಿರುತ್ತಾರೆ.