ಬಂಟರ ಸಂಘದ ಅಭಿವೃದ್ಧಿಗೆ ಎಲ್ಲಾ ಬಂಟರು ಮುಂದೆ ಬರಬೇಕು :ಚಂದ್ರಹಾಸ್ ಕೆ. ಶೆಟ್ಟಿ
ಮುಂಬಯಿ, ಆ.22 : ದಿಶಾ ” ಒಂದು ಉತ್ತಮ ಕಾರ್ಯಕ್ರಮ ಬಂಟರ ಸಂಘದ ಪ್ರತಿಯೊಂದು ಕಾರ್ಯಕ್ರಮವು ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತಿದೆ. ನಮ್ಮ ಹಿಂದಿನವರು ಹಾಕಿರುವ ಸದೃಢ ಅಡಿಪಾಯ ಶ್ರೇಯೋಭಿವೃದಿಗೆ ಕಾರಣವಾಗಿದೆ ಇದಕ್ಕೆ ಎಸ್. ಎಂ. ಶೆಟ್ಟಿ ಸ್ಕೂಲ್ ಉದಾಹರಣೆಯಾಗಿದೆ ಎಂದು ಬಂಟರ ಸಂಘ ಮುಂಬಯಿ ಅದ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಅವರು ತಿಳಿಸಿದರು.
ಆ.21 ರಂದು ಪೊವಾಯಿ ಎಸ್.ಎಂ.ಶೆಟ್ಟಿ ಶಾಲೆಯ ಸಭಗೃಹದಲ್ಲಿ ಬಂಟರ ಸಂಘ ಮುಂಬಯಿ , ಅಂಧೇರಿ – ಬಾಂದ್ರ ಪ್ರಾದೇಶಿಕ ಸಮಿತಿಯ ದಿಶಾ ಶೈಕ್ಷಣಿಕ ನೆರವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಾ ದಾನಿಗಳ ಸಹಾಯದಿಂದ ವಿದ್ಯಾರ್ಥಿ ದತ್ತು ಸ್ವೀಕಾರ , ಕುಟುಂಬ ದತ್ತು ಸ್ವೀಕಾರ ಕಾರ್ಯಕ್ರಮಗಳು ಎಲ್ಲಾ ಪ್ರಾದೇಶಿಕ ಸಮಿತಿಗಳಲ್ಲಿ ಆರಂಭವಾಗಿದೆ. ಬಂಟರ ಸಂಘ ವರ್ಷಕ್ಕೆ ಸುಮಾರು ರೂಪಾಯಿ ಹತ್ತರಿಂದ ಹನ್ನೆರಡು ಕೋಟಿ ರೂಪಾಯಿಗಳು ಬಂಟರ ಸಹಾಯಕ್ಕಾಗಿ ವೆಚ್ಚವನ್ನು ಮಾಡುತ್ತಿದೆ.ಇದಕ್ಕೆ ಪ್ರತಿಯೊಬ್ಬರ ಯೋಗದಾನ ವಿದೆ ಎಂದರು ತಮ್ಮ ಮಾತನ್ನು ಮುಂದುವರಿಸುತ್ತಾ ಬಂಟ ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೋತ್ಸಾಹ ನೀಡುವುದು ಮಾತ್ರವೇ ಅಲ್ಲದೇ ಮಕ್ಕಳಲ್ಲಿ ಕಂಡುಬರುವ ಪ್ರತಿಭೆಗೆ ವಿಶೇಷ ಬೆಂಬಲ ನೀಡಲಾಗುತ್ತದೆ . ಇಂದು ಬಂಟರ ಸಂಘದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ದಾನಿಗಳು ಮುಂದೆ ಬಂದು ಸಹಕರಿಸುತ್ತಾರೆ ಹಾಗಾಗಿ ಯಾವುದೇ ಕೆಲಸ ಉಳಿದು ಹೋಗುವುದಿಲ್ಲ ಆದರಿಂದ ನಾವು ಸಮಯಕ್ಕೆ ಸರಿಯಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ, ಬಂಟರ ಸಂಘದಲ್ಲಿ ಜರಗುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ನಮ್ಮ ಸಾಮರ್ಥ್ಯ ಅನುಸಾರ ಸಹಕರಿಸಿ , ಬಂಟರ ಸಂಘದ ಅಭಿವೃದ್ಧಿಗೆ ಎಲ್ಲಾ ಬಂಟರು ಮುಂದೆ ಬರಬೇಕು ಎಂದು ವಿನಂತಿಸಿ, ಬೊರಿವಲಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಂಟರ ಸಂಘ ಶಿಕ್ಷಣ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಸವಿಸ್ತಾರವಾಗಿ ಸಭೆಗೆ ತಿಳಿಸಿದರು .
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮುಲುಂಡ್ ಬಂಟ್ಸ್ ಅಧ್ಯಕ್ಷ ಶಾಂತಾರಾಮ್ ಬಿ. ಶೆಟ್ಟಿ ಮಾತನಾಡಿ ಅಂದೇರಿ ಬಾಂದ್ರ ಪರಿಸರದಲ್ಲಿ ನಮ್ಮ ಬಂಟರು ವಿಶಾಲ ಮನಸಿನ ಕೊಡುಗೈ ದಾನಿಗಳು . ದಿಶಾ ಅಂತಹ ಕಾರ್ಯಕ್ರಮದಿಂದ ಬಂಟರ ಸಂಘದ ಹೊರೆ ಕಡಿಮೆಯಾಗುತ್ತದೆ . ಇಂತಹ ಕಾರ್ಯಕ್ರಮಗಳು ಎಲ್ಲಾ ಪ್ರಾದೇಶಿಕ ಸಮಿತಿಯಲ್ಲಿ ನಡೆಯುತ್ತಿರಲಿ . ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಪ್ರತಿಯೊಂದು ಕಾರ್ಯಕ್ರಮಕ್ಕೆ ಬಂಟರ ಸಂಘ ಮುಂಬಯಿ ಇದರ ಎಲ್ಲಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರ ಸಂಪೂರ್ಣ ಬೆಂಬಲ ಸಿಗುತ್ತದೆ ಇದು ಬಹಳ ಸಂತೋಷದ ಸಂಗತಿ. ನಾವು ಯಾವುದೇ ಒಳ್ಳೆಯ ಕೆಲಸ ಮಾಡುವಾಗ ನಮ್ಮ ಹಿಂದೆ ನಮ್ಮ ಸಮಾಜ ಇದೆ ಎನ್ನುವುದಕ್ಕೆ ಈ ವರ್ಷ ನಡೆದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಯಶಸ್ವಿ ಕಾರ್ಯಕ್ರಮ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮದಿಂದ ಬಡ ಕುಟುಂಬ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಅಧ್ಯಕ್ಷರು , ಅತಿಥಿ – ಗಣ್ಯರು, ಕಾರ್ಯಾಧ್ಯಕ್ಷರು , ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾದೇಶಿಕ ಸಮಿತಿಯ ಸಂಚಾಲಕ ಆರ್.ಜಿ. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು . ಅಂಧೇರಿ – ಬಾಂದ್ರ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿಯವರು ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಶೆಟ್ಟಿ , ಅಪ್ಪಣ ಶೆಟ್ಟಿ , ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ , ಉದ್ಯಮಿ ರಾಜೇಂದ್ರ ಶೆಟ್ಟಿ , ಕಾರ್ನಾಡ್ ಭಾಸ್ಕರ್ ಶೆಟ್ಟಿ, ಬೆಳಂಪಳ್ಳಿ ಬಾಲಕೃಷ್ಣ ಶೆಟ್ಟಿ , ಸಿ.ಎಸ್. ಸತೀಶ್ , ಶ್ರೀಮತಿ ವನಿತಾ ನೊಂಡ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಪ್ರದೀಪ್ ಶೆಟ್ಟಿಯವರನ್ನು ಪುಷ್ಪಗಚ್ಛವನ್ನಿತ್ತು ಗೌರವಿಸಲಾಯಿತು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ , ಅಂದೇರಿ ಬಾಂದ್ರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ , ಸಂಚಾಲಕ ಆರ್.ಜಿ. ಶೆಟ್ಟಿ , ಉಪಾಧ್ಯಕ್ಷರಾದ ಯಶವಂತ್ ಶೆಟ್ಟಿ ಹಾಗೂ ರಮೇಶ್ ರೈ , ಕೋಶಾಧಿಕಾರಿ ಕೆ. ವಿ. ಶೆಟ್ಟಿ , ಜೊತೆ ಕಾರ್ಯದರ್ಶಿ ಸೂರಾಜ್ ಶೆಟ್ಟಿ , ಜೊತೆ ಕೋಶಾಧಿಕಾರಿ ಪ್ರಭಾಕರ್ ಶೆಟ್ಟಿ ನಾನಯರ ಗರಡಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ವಜ್ರ ಪೂಂಜ, ಅಂಧೇರಿ – ಬಾಂದ್ರ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ಪ್ರಶಾಂತಿ ಡಿ. ಶೆಟ್ಟಿ ನಾನಯರ ಗರಡಿ ಪ್ರಾರ್ಥನೆ ಮಾಡಿದರು, ಕಾರ್ಯಕ್ರಮವನ್ನು ರಂಗ ನಿದೇರ್ಶಕ ಚಿತ್ರನಟ ಬಾಬಾಪ್ರಸಾದ್ ಅರಸ ಕುತ್ಯಾರು ನಿರೂಪಿಸಿದರು , ಉಪಕಾರ್ಯಾಧ್ಯಕ್ಷ ರಮೇಶ್ ರೈ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಐಕಳ ಗುಣಪಾಲ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಅಜೆಕಾರು ಕಲಾಭಿಮಾನಿ ಬಳಗದಿಂದ ಊರಿನ ಪ್ರಸಿದ್ಧ ಕಲಾವಿದರಿಂದ ಕಾರ್ನಿಕದ ಕೊರಗಜ್ಜ ತಾಳಮದ್ದಳೆ ನಡೆಯಿತು. ಭಾಗವತರಾಗಿ ಕಟೀಲು ಮೇಳದ ದೇವಿ ಪ್ರಸಾದ್ ಆಳ್ವ ತಲಪಾಡಿ , ಚೆಂಡೆಯಲ್ಲಿ ಸುಬ್ರಮಣ್ಯ ಭಟ್ ದೇಲಂತಮಜಲು , ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು ಸಹಕರಿಸಿದರು. ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳಿ , ಜಯಪ್ರಕಾಶ್ ಶೆಟ್ಟಿ ಪೆರ್ಮುದೆ , ಸದಾಶಿವ ಆಳ್ವ ತಲಪಾಡಿ , ದಿನೇಶ್ ಶೆಟ್ಟಿ ಕಾವಳ ಕಟ್ಟೆ , ಪ್ರಸಾದ್ ಸವಣೂರು ಭಾಗವಹಿಸಿದರು .ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.