ಮಾಲಿನ್ಯಕಾರಕ ಕೈಗಾರಿಕೆಗಳ ಮೇಲೆ ಕ್ರಮ ಜರುಗಿಸದಿದ್ದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೀಗ ಜಡಿಯುತ್ತೇವೆ : ಮುನೀರ್ ಕಾಟಿಪಳ್ಳ

ಪರಿಸರ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿರುವ, ಸುತ್ತಲ ಗ್ರಾಮಗಳ ಜನರ ಬದುಕನ್ನು ನರಕ ಸದೃಶಗೊಳಿಸಿರುವ ಎಸ್ಇಝಡ್, ಅದಾನಿ ವಿಲ್ಮಾ, ರುಚಿಗೋಲ್ಡ್, ಯು ಬಿ ಬಿಯರ್ ಸಹಿತ ಕೈಗಾರಿಕೆ ಘಟಕಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.
ಅವರು ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂಭಾಗ “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಭಾಗದ ಕೈಗಾರಿಕೆಗಳು ಅಂಕೆಯಿಲ್ಲದೆ ಮಾಲಿನ್ಯ ಹರಿಸುತ್ತಿದ್ದು ಇದರಿಂದ ಸುತ್ತಲ ಗ್ರಾಮಗಳ ಕುಡಿಯುವ ನೀರು, ಉಸಿರಾಡುವ ಗಾಳಿ ವಿಷಮಯಗೊಂಡಿದೆ. ಜೀವನದಿ ಪಲ್ಗುಣಿ ಕೊಳೆತು ನಾರುತ್ತಿದೆ. ಜೋಕಟ್ಟೆ, ಕಳವಾರು ಭಾಗದಲ್ಲಿ ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶ ಧಿಕ್ಕರಿಸುತ್ತಿರುವುರಿಂದನಿಂದಾಗಿ ಆ ಗ್ರಾಮಗಳ ಜನರು ಬದುಕು ನರಕ ಸದೃಶವಾಗಿದೆ. ಕೋಕ್ ಸಲ್ಫರ್ ಘಟಕದ ಮಾಲಿನ್ಯದ ವಿರುದ್ದ ಕಳೆದ ಏಳು ವರ್ಷಗಳಿಂದ ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಸ್ಥರು ಸತತ ಹೋರಾಟ ನಡೆಸುತ್ತಿದ್ದಾರೆ. 2017 ರಲ್ಲಿ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳನ್ನು ನಡೆಸುವಂತೆ ಆದೇಶಿಸಿದ್ದರೂ ಕಂಪೆನಿ ನಿರ್ಲಕ್ಷ ವಹಿಸಿದೆ.
ಇದರಿಂದಾಗಿ ಪೆಟ್ರೋ ಕೆಮಿಕಲ್ ಮಾಲಿನ್ಯ ಅವ್ಯಾಹತವಾಗಿ ಮುಂದುವರಿದು ಈ ಗ್ರಾಮಗಳು ರೋಗಗಳ ಕೊಂಪೆಯಾಗಿದೆ. ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡ ಕಂಪೆನಿಗಳ ಹಿತವನ್ನೇ ಎತ್ತಿ ಹಿಡಿಯುತ್ತಿದೆ. ಸಂಸದ, ಶಾಸಕರುಗಳು ಇದನ್ನೆಲ್ಲ ಒಂದು ಸಮಸ್ಯೆ ಅಂತಲೇ ಪರಿಗಣಿಸಿಲ್ಲ ಎಂದು ಅವರು ಅಪಾದಿಸಿದರು. ಅದಾನಿ ವಿಲ್ಮಾ, ರುಚಿಗೋಲ್ಡ್, ಯು ಬಿ ಬಿಯರ್ ಸಹಿತ ಕೆಲವು ಪ್ರಭಾವಿ ಕಂಪೆನಿಗಳು ತಮ್ಮ ಕೈಗಾರಿಕಾ ತ್ಯಾಜ್ಯ ಗಳನ್ನು ವರ್ಷಗಳಿಂದ ನೇರವಾಗಿ ಪಲ್ಗುಣಿ ನದಿಗೆ ಹರಿಸುತ್ತಿವೆ. ಪಲ್ಗುಣಿ ನದಿದಂಡೆಯಲ್ಲಿರುವ ಈ ಭಾಗದ ಗ್ರಾಮಸ್ಥರು ತಮ್ಮ ಸಾಂಪ್ರಾದಾಯಿಕ ಮೀನುಗಾರಿಕೆ, ತರಕಾರಿ ಕೃಷಿ, ಸುಣ್ಣದ ಚಿಪ್ಪು ಹೆಕ್ಕುವ ಕಾಯಕವನ್ನೇ ಇಂದು ತ್ಯಜಿಸುವಂತಾಗಿದೆ. ಕುಡಿಯಲು ಶುದ್ದ ನೀರೂ ಸಿಗದೆ ನರಳುತ್ತಿದ್ದಾರೆ. ಸತತ ದೂರುಗಳ ಹೊರತಾಗಿಯು ಜನರ ಗೋಳುಗಳನ್ನು ಇಲ್ಲಿ ಕೇಳುವವರಿಲ್ಲ. ಜೀವನದಿ ಪಲ್ಗುಣಿಯಂತೂ ಯಾರಿಗೂ ಬೇಡದ ಕೊಳಚೆ ಗುಂಡಿಯಂತಾಗಿದೆ ಎಂದು ಮುನೀರ್ ಆರೋಪಿಸಿದರು. ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್ ಅಬೂಬಕ್ಕರ್ ಬಾವಾ ಮಾತಾಡಿದರು.

ತೋಕೂರು, ಕಳವಾರು, ಕೆಂಜಾರು, ಸುರತ್ಕಲ್, ಬಜ್ಪೆ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಚರ್ಮ ರೋಗಗಳ ಸಹಿತ ಕೈಗಾರಿಕಾ ಮಾಲಿನ್ಯ ಸಂಬಂಧಿಸಿದ ರೋಗಗಳು ವಿಪರೀತವಾಗಿ ಏರಿಕೆ ಕಂಡಿದೆ. ಸುತ್ತಲಿನ ಗ್ರಾಮಗಳ ಜನರ ಆರೋಗ್ಯದ ಸ್ಥಿತಿಗತಿಗಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತ್ಯೇಕ ಅಧ್ಯಯನ ನಡೆಸಬೇಕು, ಎಮ್ಆರ್ ಪಿಎಲ್ ಸಹಿತ ನಿಯಮ ಉಲ್ಲಂಘಿಸುವ ಕೈಗಾರಿಕೆಗಳಿಗೆ ಬೀಗ ಜಡಿಯಬೇಕು ಎಂದು ಸಮಿತಿಯ ಪರವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ ಎಸ್ ಬಶೀರ್, ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆವಿನ್ ಫೆರಾವೊ, ಮಾಜಿ ಅಧ್ಯಕ್ಷೆ ಪ್ರೆಸಿಲ್ಲಾ ಮೊಂತೆರೊ, ಸದಸ್ಯೆ ಜುಬೇದಾ, ಮನೋಜ್ ಜೋಕಟ್ಟೆ, ಶ್ರೀನಿವಾಸ್, ಸುರೇಂದ್ರ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಚಂದ್ರಶೇಖರ್, ಹನೀಫ್, ಸಿಲ್ವಿಯಾ ಜೋಕಟ್ಟೆ, ಅಮೀನಮ್ಮ, ಶೇಖರ್ ನಿರ್ಮುಂಜೆ, ರಾಜು ಜೋಕಟ್ಟೆ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಗೆ ಮುಂಚಿತವಾಗಿ ಗ್ರಾಮಸ್ಥರು ಮುಂಗಾರು ಬಳಿಯಿಂದ ಮೆರವಣಿಗೆ ನಡೆಸಿದರು.
