ನಾರಾಯಣ ಗುರು ಅಭಿವೃದ್ಧಿ ನಿಗಮ ಚುನಾವಣೆಯ ಗಿಮಿಕ್ : ಸತ್ಯಜಿತ್ ಸುರತ್ಕಲ್

ಚುನಾವಣೆಗೆ ಎರಡು ತಿಂಗಳು ಇರುವಾಗ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. ಈಗಲಾದರೂ ಮಾಡಿದ್ದಕ್ಕೆ ರಾಜ್ಯ ಸರ್ಕಾರ ಮತ್ತು ಇದಕ್ಕಾಗಿ ಹೋರಾಟ ಮಾಡಿದವರಿಗೆ ಅಭಿನಂದನೆ ಹೇಳುತ್ತೇವೆ. ಆದರೆ ಈ ಹೊತ್ತಿನಲ್ಲಿ ಅಭಿವೃದ್ಧಿ ನಿಗಮ ಘೋಷಿಸಿ ಇದರ ಲಾಭ ಈಗ ಸಮುದಾಯಕ್ಕೆ ಸಿಗಲು ಸಾಧ್ಯವಿಲ್ಲ. ಇದೊಂದು ಚುನಾವಣೆಗೆ ಮೆಟ್ಟಿಲು ಅನ್ನುವ ರೀತಿ ಮಾಡಿದ್ದಾರಷ್ಟೇ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ, ಬಿಲ್ಲವ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಬಿಲ್ಲವ ಮುಖಂಡರ ಜೊತೆಗೆ ಸುದ್ದಿಗೋಷ್ಟಿ ನಡೆಸಿದ ಅವರು, ಇನ್ನೇನು ಒಂದು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಅದಕ್ಕೂ ಮೊದಲು ನಿಗಮ ಅಸ್ತಿತ್ವಕ್ಕೆ ಬರಲ್ಲ. ಈ ಮೊದಲೇ ಅದಕ್ಕೊಬ್ಬ ಅಧ್ಯಕ್ಷರು, ಸಮಿತಿ ರಚನೆ ಆಗುತ್ತಿದ್ದರೆ ಕೆಲಸ ಆರಂಭ ಆಗುತ್ತಿತ್ತು. ಬಜೆಟ್‍ನಲ್ಲಿ ಒಂದಷ್ಟು ಅನುದಾನ ಘೋಷಿಸಿದ್ದರೆ ಲಾಭ ಇರುತ್ತಿತ್ತು. ಬಜೆಟ್ ಜಾರಿಗೆ ಬರುವುದೂ ಎಪ್ರಿಲ್ ನಂತರ. ಆದರೆ ಮಾರ್ಚ್ ಕೊನೆಯಲ್ಲಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇರುವುದರಿಂದ ಬಜೆಟ್ ಘೋಷಣೆ ಅನುಷ್ಠಾನ ಸಾಧ್ಯವಿಲ್ಲ ಎಂದರು.
ಬಿಲ್ಲವ ಮುಖಂಡ, ವಕೀಲ ಪದ್ಮರಾಜ್ ಮಾತನಾಡಿ, ಇದಕ್ಕಾಗಿ ಪಕ್ಷಾತೀತ ಹೋರಾಟ ಮಾಡಿದ ಪ್ರತಿಯೋರ್ವರಿಗೂ ಅಭಿನಂದನೆ ಸಲ್ಲಿಸುತ್ತೇವೆ. ನಾಲ್ಕು ವರ್ಷಗಳಿಂದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಬ್ರಹ್ಮಾವರದಲ್ಲಿ ಮೊದಲ ಬಾರಿಗೆ ಬಿಲ್ಲವರ ಸಮಾವೇಶ ಮಾಡಿ ಹೋರಾಟ ಆರಂಭಿಸಲಾಗಿತ್ತು. ಇದು ಆರಂಭಿಕ ಹೆಜ್ಜೆ ಅಷ್ಟೇ. ನಿಗಮದ ಬಗ್ಗೆ ಬೈಲಾ ಇನ್ನಿತರ ಪ್ರಕ್ರಿಯೆಗಳು ಬೇಕು. ಇದಕ್ಕೆ ಕನಿಷ್ಠ 3 ತಿಂಗಳು ಸಮಯ ಬೇಕಾಗುತ್ತದೆ. ಆದರೆ 15 ದಿನದಲ್ಲಿ ಚುನಾವಣೆ ನೀತಿ ಸಂಹಿತೆ ಬರುತ್ತದೆ. ಇದರಿಂದ ಸಮಾಜ ಎಚ್ಚರದಲ್ಲಿ ಇರಬೇಕು ಎಂದಷ್ಟೇ ಹೇಳುತ್ತೇನೆ. ನಿಗಮ ಸ್ಥಾಪನೆ ಮಾತ್ರಕ್ಕೆ ಇದರ ಲಾಭ ಸಮಾಜಕ್ಕೆ ದೊರಕಲ್ಲ ಎಂದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ರಾಜೇಂದ್ರ ಚಿಲಿಂಬಿ, ಸತೀಶ ಕುಮಾರ್, ದೇವೇಂದ್ರ ಪೂಜಾರಿ ಉಪಸ್ಥಿತರಿದ್ದರು.
