ಮಾ.25ರಂದು ಮೋರ್ಲ ಬೋಳದಲ್ಲಿ ಪ್ರಥಮ ವರ್ಷದ ನರಿಂಗಾನ ಕಂಬಳ

ಉಳ್ಳಾಲ: ಇಲ್ಲಿನ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಲವಕುಶ ಜೋಡುಕರೆ ಹೆಸರಿನಲ್ಲಿ ನರಿಂಗಾನ ಕಂಬಳ ಮಾ. 25ರಂದು ಹೊನಲು ಬೆಳಕಿನಲ್ಲಿ ನಡೆಯಲಿದ್ದು ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ತುಳುನಾಡಿನ ಧಾರ್ಮಿಕ ವಿಧಿಗಳೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.ಕಂಬಳ ಕರೆಯ ಬಳಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮಾ. 25ರಂದು ಬೆಳಗ್ಗೆ ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ಪ್ರಧಾನ ತಂತ್ರಿಗಳಾದ ವೇದಮೂರ್ತಿ ವರ್ಕಾಡಿ ರಾಜೇಶ್ ತಾಳಿತ್ತಾಯರವರು ದೀಪ ಪ್ರಜ್ವಲಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ ಹಾಗೆ ಕರೆಯನ್ನು ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ಶ್ರೀ ತಿಮ್ಮಪ್ಪ ಕೊಂಡೆಯಾನೆ ಮಂಜು ಭಂಡಾರಿ ಅವರು ಉದ್ಘಾಟಿಸಲಿದ್ದಾರೆ ಎಂದರು.
ಈ ಕಂಬಳ ನರಿಂಗಾನ ಗ್ರಾಮಸ್ಥರಿಗೆ ಸುಗ್ಗಿ, ಇಡೀ ಮಂಗಳೂರು ಕ್ಷೇತ್ರದಾದ್ಯಂತ ಸಂಭ್ರಮ ಸಡಗರ ಮನೆ ಮಾಡಿದೆ. ಪ್ರತಿ ಮನೆಗೆ ಜಾತ್ರೆಯಂತೆ ನೆಂಟರು ಸೇರಲಿದ್ದಾರೆ. ಕ್ಷೇತ್ರದ ಶಾಸಕನ ನೆಲೆಯಲ್ಲಿ ನನ್ನದೇ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಂಬಳ ಪಕ್ಷ, ಧರ್ಮ, ಜಾತಿ, ಬಡವ ಬಲ್ಲಿದ, ಮೇಲು ಕೀಳೆಂಬ ಭಾವನೆಯೇ ಸೃಷ್ಟಿಯಾಗಲು ಅವಕಾಶ ಕೊಡದ ಕಂಬಳ ಎಂದರು.
ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ ಕಂಬಳದಲ್ಲಿ ಕಾನೂನು ಉಲ್ಲಂಘನೆ ಆಗದಂತೆ “ಪೇಟಾದ ನಿಯಮ ಪ್ರಕಾರ”ವೇ ಕಂಬಳ ನಡೆಸುವ ಸಲುವಾಗಿ ದಕ್ಷರನ್ನೊಳಗೊಂಡ ಕಂಬಳ ಪ್ರೇಮಿಗಳೇ ಇರುವ ಕಂಬಳ ಸಮಿತಿ ಹಾಗೂ ಇತರ ಉಪ ಸಮಿತಿ ರಚಿಸಲಾಗಿದೆ.
24ಗಂಟೆ ಒಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ, ಹಾಗಿದ್ದರೂ ಯಾವುದಕ್ಕೂ ದೂರದ ಊರಿನಿಂದ ಬಂದ ಸೇರಲಿರುವ ಕೋಣಗಳ ಯಜಮಾನರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ.
ಕಾರ್ಯಾಧ್ಯಕ್ಷರ ಪ್ರಶಾಂತ್ ಕಾಜವ ಮಿತ್ತಕೋಡಿ, ಪ್ರಧಾನ ಕಾರ್ಯದರ್ಶಿನವಾಝ್ ನರಿಂಗಾನ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಶೆಟ್ಟಿ ಮೋರ್ಲಗುತ್ತು, ಕರುಣಾಕರ ಶೆಟ್ಟಿ ಮೋರ್ಲ, ಮ್ಯಾಕ್ಸಿಯಮ್ ಡಿಸೋಜ, ಮಹಿಳಾ ವಿಭಾಗ ಅದ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ , ಮತ್ತಿತರರು ಉಪಸ್ಥಿತರಿದ್ದರು.