ಸರ್ಕಾರಿ ಶಾಲೆಗೆ ಹೊಸ ಕಟ್ಟಡ ಹಾಲಾಡಿಯ ಎಚ್.ಎಸ್. ಶೆಟ್ಟಿಯವರ ಕೊಡುಗೆ

ಬ್ರಹ್ಮಾವರ: ಶಿಕ್ಷಣ ಕ್ರಾಂತಿಯ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 129 ವರ್ಷದ ಸರಕಾರಿ ಹಿರೀಯ ಪ್ರಾಥಮಿಕ ಶಾಲೆಯಲ್ಲಿ 669 ವಿದ್ಯಾರ್ಥಿಗಳನ್ನು ಹೊಂದಿ ತರಗತಿ ಕೊಠಡಿಯ ಸಮಸ್ಯೆಗೆ ದಾನಿಯೊಬ್ಬರು 2 ಮಹಡಿಯ 8 ತರಗತಿ ಕೊಠಡಿಯನ್ನು ನಿರ್ಮಿಸಿ ಕೊಟ್ಟು ಈ ಶೈಕ್ಷಣಿಕ ವರ್ಷಕ್ಕೆ ಕೊಡುಗೆಯಾಗಲಿದೆ.
ಗ್ರಾಮೀಣ ಭಾಗದ ಹಾಲಾಡಿಯ ಎಚ್ ಎಸ್ ಶೆಟ್ಟಿಯವರು ಸರಕಾರಿ ಕನ್ನಡ ಶಾಲೆಯಲ್ಲಿ ಕಲಿತು ವಿಶ್ವ ಮಟ್ಟದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡು ಉಡುಪಿ ಜಿಲ್ಲೆ ಸೇರಿದಂತೆ ಅನೇಕ ಭಾಗದಲ್ಲಿ ಶಿಕ್ಷಣ, ಪರಿಸರ,ಧಾರ್ಮಿಕ ಕಾರ್ಯಕ್ರಮಕ್ಕೆ ಲಾಭದ ಒಂದು ಅಂಶವನ್ನು ಪ್ರೋತ್ಸಾಹ ರೂಪದಲ್ಲಿ ನೀಡುವ ಅಪರೂಪದ ವ್ಯಕ್ತಿ.ಶೆಟ್ಟಿಯವರು ಇಲ್ಲಿನ ಶಾಲೆಯ ಶಿಕ್ಷಣ ಗುಣಮಟ್ಟ ಶಿಸ್ತು ಗಮನಿಸಿ 2ಕೋಟಿ 86 ಲಕ್ಷ ರೂ ವೆಚ್ಛದಲ್ಲಿ 2 ಅಂತಸ್ತಿನ ಉತ್ತಮ ತರಗತಿ ಕೊಠಡಿಯನ್ನು ನಿರ್ಮಿಸಿ ಸರಕಾರಕ್ಕೆ ನೀಡಲಿದ್ದು ಈ ವರ್ಷದಿಂದಲೆ ವಿದ್ಯಾರ್ಥಿಗಳು ಹೊಸ ಕಟ್ಟಡದಲ್ಲಿ ಶಿಕ್ಷಣ ಪಡೆಯಲಿದ್ದಾರೆ.

ಇದೇ ಶಾಲಾ ಆವರಣದಲ್ಲಿ ಪ್ರತೀ ವರ್ಷ ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ ನಡೆಯುವ ಸ್ಥಳದಲ್ಲಿ ದಾನಿಯೊಬ್ಬರಿಂದ ಹೊಸ ತರಗತಿ ಕೊಠಡಿ ನೀಡಿರುವುದು, ಸ್ವಾತಂತ್ರ್ಯ ಪೂರ್ವದ ವಿದ್ಯಾದೇಗುಲವೊಂದರಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆದಿರುವುದು ಕರಾವಳಿ ಜಿಲ್ಲೆಗೆ ಹೆಮ್ಮೆಯಾಗಿದೆ.
