ಸುಳ್ಯ: ಎನ್‌ಎಂಸಿ ನೇಚರ್ ಕ್ಲಬ್ ವತಿಯಿಂದ ಸ. ಹಿ. ಪ್ರಾ. ಶಾಲೆ ಕನ್ನಡ ಪೆರಾಜೆಯಲ್ಲಿ ಹಸಿರು ಉಸಿರು ಕಾರ್ಯಕ್ರಮ

ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಗ್ರಾಮ ಪಂಚಾಯತ್ ಪೆರಾಜೆ, ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ವಲಯ, ಹಿರಿಯ ವಿದ್ಯಾರ್ಥಿ ಸಂಘ ಕನ್ನಡ ಪೆರಾಜೆ ಶಾಲೆ, ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಪೆರಾಜೆಯಲ್ಲಿ ‘ಹಸಿರು ಉಸಿರು’ ಸಸ್ಯೋದ್ಯಾನ ನಿರ್ಮಾಣ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮವನ್ನು ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ ಗಿಡ ನೆಟ್ಟು ನೀರೆರೆದು ಉದ್ಘಾಟಿಸಿ ಮಾತನಾಡಿ ‘ಪ್ರಕೃತಿ ಸಂರಕ್ಷಣೆ ಮಾಡುವಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ಅಗತ್ಯ ಮತ್ತು ಶಾಲಾ ಆವರಣದಲ್ಲಿ ಗಿಡ ನೆಟ್ಟು ಇಲ್ಲಿನ ಮಕ್ಕಳಲ್ಲಿ ಸಸ್ಯ ಸಂರಕ್ಷಿಸುವ ಹೊಣೆ ನೀಡುವ ಕಾರ್ಯಕ್ರಮ, ಆಯೋಜಕರ ಪ್ರಯತ್ನ ಶ್ಲಾಘನೀಯ’ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಕೃಷಿ ಸಾಧನೆಗಾಗಿ ಸ್ವತಃ ಉಳುಮೆ ಮೂಲಕ ಭತ್ತದ ಕೃಷಿ ಉಳಿಸಿಕೊಂಡಿರುವ ಸುಬ್ರಹ್ಮಣ್ಯ ಮೂಲೆಮಜಲು, ಯೋಗೀಶ್ ನಾಯಕ್ ಮತ್ತು ಕಿರಣ್ ಮೂಲೆಮಜಲು, ಪ್ರಸಿದ್ದ ನಾಟಿ ವೈದ್ಯರಾದ ಲೀಲಾವತಿ ಮಜಿಕೋಡಿ ಮತ್ತು ಜಯರಾಮ ಪೆರಂಗಾಜೆ ಇವರನ್ನು ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಅತಿಥಿಗಳಾಗಿದ್ದ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಡೈಸಿ ಸಿ. ಪಿ. ಮಾತನಾಡಿ ಇಂದು ಗಿಡ ಮರಗಳ ರಕ್ಷಣೆಯ ಅನಿವಾರ್ಯತೆ ಬಗ್ಗೆ ವಿವರಿಸಿ ಮಕ್ಕಳಿಗೆ ಗಿಡಗಳನ್ನು ಸಲಹುವ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶ್ರಫ್ ಪಿ. ಎಮ್ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗೌರವ ಗಣ್ಯರಾಗಿ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಾಲಚಂದ್ರ ಗೌಡ, ಪೆರಾಜೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಜಿ.ವಿ; ಅತಿಥಿಗಳಾದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ, ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ವಲಯದ ಅರಣ್ಯಾಧಿಕಾರಿ ಶೈಲಜಾ ಎಲ್, ಗ್ರಾಮ ಪಂಚಾಯತ್ ಪೆರಾಜೆಯ ಸ್ಥಳೀಯ ಸದಸ್ಯರಾದ ಸುರೇಶ್ ಪೆರುಮುಂಡ, ಭೂದೇವಿ ಪೆರಾಜೆ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಪಿ. ಎನ್, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉನೈಸ್ ಪೆರಾಜೆ ಉಪಸ್ಥಿತರಿದ್ದರು. ಭಾಗವಹಿಸಿದ ಗಣ್ಯರಿಗೆ ಮತ್ತು ಎಲ್ಲಾ ಮಕ್ಕಳಿಗೆ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಎನ್ನೆಂಸಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮತ್ತು ನೇಚರ್ ಕ್ಲಬ್ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನೇಚರ್ ಕ್ಲಬ್ ಸದಸ್ಯರಾದ ಚೈತ್ರ ಮತ್ತು ಶಿಲ್ಪಾ ಪ್ರಾರ್ಥಿಸಿ, ಶಾಲೆಯ ಮುಖ್ಯ ಗುರುಗಳಾದ ಜಯಲಕ್ಷ್ಮಿ ಬಿ. ಎನ್ ವಂದಿಸಿದರು. ಕೀರ್ತಿಕಾ ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಕೃತಿಕಾ, ಅಜಿತ್ ಕುಮಾರ್, ಪಲ್ಲವಿ ಮತ್ತು ಲ್ಯಾಬ್ ಸಹಾಯಕಿ ಭವ್ಯ ಹಾಗೂ ಕನ್ನಡ ಪೆರಾಜೆ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು. ಶಾಲಾ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಅಶೋಕ್ ಪೀಚೆ ಮತ್ತು ಬಳಗದವರು ಅಗತ್ಯ ಸಲಕರಣೆ ಒದಗಿಸಿ ಶಾಲಾ ಆವರಣದ ಸ್ವಚ್ಚತೆಗೆ ತೊಡಗಿಸಿಕೊಂಡರು.

ಕಾಲೇಜಿನ ನೇಚರ್ ಕ್ಲಬ್ ಸದಸ್ಯರು ಶಾಲಾ ಆವರಣದಲ್ಲಿ ಸುಮಾರು 36 ವಿವಿಧ ಜಾತಿಯ ಹಣ್ಣಿನ, ಗಿಡಗಳನ್ನು ನೆಟ್ಟು ಕೊನೆಯ ಅವಲೋಕನ ಅವಧಿಯ ನಂತರ ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಪೋಷಿಸುವ ಜವಾಬ್ದಾರಿ ವಹಿಸಲಾಯಿತು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೆರುಮುಂಡ ಗಿಡಗಳನ್ನು ಉತ್ತಮವಾಗಿ ಬೆಳೆಸಿದ ಮಕ್ಕಳಿಗೆ ವಿಶೇಷ ಬಹುಮಾನ ನೀಡುವುದಾಗಿ ಘೋಷಿಸಿದರು.

Related Posts

Leave a Reply

Your email address will not be published.