ಅರ್ಧ ಶತಮಾನದ ನಿರೀಕ್ಷೆಗಳ ಕಿಟಕಿಗೆ ನೀಲಿ ಪರದೆ ಮುಚ್ಚಿ ಹೋದ ದಂತ ಕಥೆ ಪಿ.ಡೀಕಯ್ಯ

ನಾಡಿನ ಹಿರಿಯ ಅಂಬೇಡ್ಕರ್ ವಾದಿ, ಬಹುಜನಪರ ಚಿಂತಕ ಪಿ.ಡೀಕಯ್ಯರವರು
ಬುದ್ಧನಿಗೊಂದು ‘ಶರಣು’ ಹೇಳದೆ ಬಹುಜನ ಸಮಾಜಕ್ಕೊಂದು ಬಲಗೈ ಮುಷ್ಠಿ ಬಿಗಿಮಾಡಿ ‘ಜೈಭೀಮ್’ ಹೇಳದೆ ಸಮಾಜ ಪರಿವರ್ತನೆಯ ಫಲವನ್ನು ಕಾಣುವುದಕ್ಕೂ ಮೊದಲೇ ಎಂದಿನ ಗಾಂಭೀರ್ಯದಲ್ಲೇ ಮರಳಿ ಮಣ್ಣಿಗೆ ಹೊರಟು ಹೋದರು. ಈ ಅಘೋಷಿತ ಆಘಾತದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳುವಳಿ ಮತ್ತು ಬಹುಜನ ಸಮಾಜ ಚಳುವಳಿಗೆ ಸೈದ್ಧಾಂತಿಕ ತಬ್ಬಲಿತನ ಕಾಡಲಿದೆಯೋ ಎಂಬ ಆತಂಕವೂ ಅನುಯಾಯಿಗಳಲ್ಲಿ ಮೂಡಬಹುದು. ಪಿ.ಡೀಕಯ್ಯರವರು 80ರ ದಶಕದಲ್ಲಿ ದ.ಕ. ಜಿಲ್ಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಹೋರಾಟದ ಕಿಚ್ಚಿನ ಬೀಜವನ್ನು ದಲಿತರ ಗುಡಿಸಲುಗಳಲ್ಲಿ ಬಿತ್ತಿದವರಲ್ಲಿ ಪ್ರಮುಖರು.

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಪೊಯ್ಯ ಎಂಬಲ್ಲಿ ಹುಟ್ಟಿದ ಪಿ.ಡೀಕಯ್ಯ ಅವರು ಪದವೀಧರರಾಗಿ ಬಿಎಸೆನೆಲ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದವರು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಅಂಬೇಡ್ಕರ್ ವಿಚಾರಗಳಿಂದ ಪ್ರಭಾವಿತರಾಗಿ ಅಂಬೇಡ್ಕರ್ ಚಿಂತನೆಯೊಂದಿಗೆ ಶೋಷಿತ ಸಮುದಾಯದ ವಿಮೋಚನೆಗಾಗಿ ಶೋಷಕ ವರ್ಗದ ಮನಪರಿವರ್ತನೆಗಾಗಿ ಒಟ್ಟು ಸಮಾಜ ಪರಿವರ್ತನೆಗಾಗಿ ಸಾಮಾಜಿಕ ಸಂಘಟನೆಗಳ ಮೂಲಕ ಚಿಕಿತ್ಸಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ನಾಡಿನಲ್ಲಿ ಭರವಸೆಯ ನಾಯಕರಾಗಿ ಹೊರ ಹೊಮ್ಮಿದವರು. ಡೀಕಯ್ಯರವರು ಸಮರ್ಥ ನಾಯಕತ್ವದಿಂದ ಸಮಕಾಲೀನ ದಲಿತ ವಿದ್ಯಾವಂತರನ್ನು ಹಾಗೂ ಬ್ರಾಹ್ಮಣರನ್ನೊಳಗೊಂಡ ದಲಿತೇತರ ವಿದ್ಯಾವಂತರನ್ನೂ ನಿರಂತರ ಒಡನಾಟ, ಮನಪರಿವರ್ತನೆಯ ಮಾರ್ಗದಲ್ಲಿ ತಮ್ಮ ಚಿಂತನೆಯತ್ತ ವಾಲುವಂತೆ ಮಾಡಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯ ಚಿಂತಕ ಬಳಗವನ್ನು ಸಂಘಟಿಸಿಕೊಳ್ಳುತ್ತಿದ್ದ ಸಂಘಟನಾ ಚತುರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಜಾಥಾ, ತರಬೇತಿ ಶಿಬಿರ, ವಿಚಾರ ಸಂಕಿರಣ, ಕಮ್ಮಟಗಳಂಥ ವಿಚಾರ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ತಾವು ನಂಬಿದ ವಿಚಾರಧಾರೆಯತ್ತ ವಿದ್ಯಾವಂತ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಬುದ್ಧ,ಅಂಬೇಡ್ಕರರನ್ನು ಎದೆಗಿಳಿಸಿಕೊಂಡಿದ್ದ ಇವರು ಬೌದ್ಧ ಧಮ್ಮ ಧೀಕ್ಷೆ ಸ್ವೀಕರಿಸಿದವರಲ್ಲಿ ಪ್ರಮುಖರಾಗಿದ್ದು ಜಿಲ್ಲೆಯಲ್ಲಿಹೊಸ ತಲೆಮಾರಿನ ಗಣನೀಯ ಸಂಖ್ಯೆಯ ಬೌದ್ಧ ಧಮ್ಮಾನುಯಾಯಿಗಳನ್ನು ಬೆಳೆಸಿರುವುದು ಇತಿಹಾಸ.

ರಾಜ್ಯಮಟ್ಟ, ರಾಷ್ಟ್ರ ಮಟ್ಟದ ಸಮಾವೇಶ, ಸಮ್ಮೇಳನಗಳ ಅಧಿವೇಶನಗಳಲ್ಲಿ ಪ್ರಬುದ್ಧ ವಿಚಾರ ಮಂಡನೆಗೈದು ಓರಗೆಯ ಸಮಾನ ಚಿಂತಕರ ಬಳಗವನ್ನೇ ಸೃಷ್ಠಿಸಿಕೊಂಡಿದ್ದ ಪಿ.ಡೀಕಯ್ಯರವರು ಪದವಿಗೂ ಮೀರಿದ ಚಿಂತಕರಾಗಿ ತಮ್ಮದೇ ಅಭಿಮಾನಿ, ಅನುಯಾಯಿಗಳನ್ನು ಸಂಪಾದಿಸಿಕೊಂಡವರೂ ಹೌದು. ತಮ್ಮ ಪ್ರಬುದ್ಧ ಭಾಷಣ, ವಿಚಾರಮಂಡನೆಗಳಿಂದ ನಾಡಿನ ಅನೇಕ ಅಂಬೇಡ್ಕರ್ ವಾದಿಗಳ, ಸಮಾಜವಾದಿಗಳ, ಹೋರಾಟಗಾರರ ಚಿಂತಕರ, ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ, ಜನಪದ ಚಿಂತಕರ, ಪತ್ರಕರ್ತರ, ಬರಹಗಾರರ ಆತ್ಮೀಯ ಒಡನಾಟ ಸಂಪಾದಿಸಿದ್ದ ಪಿ.ಡೀಕಯ್ಯರವರ ವೈಚಾರಿಕ ಪ್ರತಿಪಾದನೆ ತಮ್ಮದೇ ಸೈದ್ಧಾಂತಿಕ ಮುದ್ರೆಯಂತಿತ್ತು. ಅವರ ಜ್ಞಾನ ಮಟ್ಟ ಚಲಿಸುವ ಸಂಪುಟದಂತಿತ್ತೆಂದರೂಅತಿಶಯೋಕ್ತಿಯಲ್ಲ.

ಡೀಕಯ್ಯರವರ ಚಳುವಳಿಯ ಹಾದಿಯಲ್ಲಿ 1980-90ರ ದಶಕದ ಕೆಲವು ಘಟನೆಗಳು ಮಹತ್ವದ ಮೈಲಿಗಲ್ಲುಗಳಾಗಿ ಕಾಣುತ್ತವೆ.80ರ ದಶಕದಲ್ಲಿ ಊರಿನ ಸಾರ್ವಜನಿಕ ದೇವಸ್ಥಾನವೊಂದರಲ್ಲಿ ಸಂಪ್ರದಾಯದ ಹೆಸರಲ್ಲಿ ದಲಿತರಿಗೆ ಪ್ರವೇಶವಿಲ್ಲದೆ ಕೆಲವು ಜಾತಿವ್ಯಾಧಿಗಳಿಂದ ಅಸ್ಪೃಶ್ಯತೆ ಉಲ್ಬಣಗೊಂಡಿತ್ತು.ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಸಂವಿಧಾನ ಬದ್ಧವಾಗಿ ಶಾಂತಿಯುತ ಸಂಘರ್ಷದ ಮೂಲಕ ಶಾಶ್ವತವಾದ ಮದ್ದರೆಯುವ ಬಗ್ಗೆ ಚಿಂತನೆ ನಡೆಸಿ ಸಮಕಾಲೀನ ಮುಖಂಡರ ಜೊತೆ ಚರ್ಚಿಸಿದ ಪಿ.ಡೀಕಯ್ಯ ಒಬ್ಬ ಜವಾಬ್ದಾರಿಯುತ ದಲಿತ ಮುಖಂಡರಾಗಿ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಬ್ರಾಹ್ಮಣ ಮುಖ್ಯಸ್ಥರನ್ನೂ ಇತರ ಹಿಂದುಳಿದ ಜಾತಿಗಳ ಗಣ್ಯರನ್ನೂ ಸಂಪರ್ಕಿಸಿ ದಲಿತರನ್ನೊಳಗೊಂಡ ಸೌಹಾರ್ದ ಸಭೆ ನಡೆಸುವಂತೆ ಸಲಹೆ ನೀಡಿ ಸಮಾಲೋಚನೆ ನಡೆಸಿ ಜಾತಿ ಸಂಘರ್ಷಕ್ಕೆಡೆ ಮಾಡದೆ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಊರಿನ. ಅಸ್ಪೃಶ್ಯತೆ ಕಳಂಕವನ್ನು ನಿವಾರಿಸುವಂತೆ ಒತ್ತಾಯಿಸಿದ್ದಲ್ಲದೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.ಬಳಿಕ ದೇವಸ್ಥಾನದ ಮುಖ್ಯಸ್ಥರಿಗೆ ಮುಂಚಿತವಾಗಿ ಮಾಹಿತಿ ನೀಡಿ ಯಾವುದೇ ಗೊಂದಲಕ್ಕೆಡೆ ಮಾಡದೆ
ಡೀಕಯ್ಯರವರ ನೇತೃತ್ವದಲ್ಲಿ ಶಾಂತಿಯುತವಾಗಿ ದಲಿತರು ದೇವಸ್ಥಾನ ಪ್ರವೇಶಿಸುವ ಮೂಲಕ ಚಾರಿತ್ರಿಕ ಪರಿವರ್ತನೆಯೊಂದು ನಡೆದಿತ್ತು. ಈ ಘಟನೆ ನಡೆದು ಕೆಲವು ವರ್ಷಗಳ ನಂತರ ಇದೇ ದೇವಸ್ಥಾನದ ಕಲಶಕ್ಕೆ ಸಿಡಿಲು ಬಡಿದಿತ್ತು.!ದಲಿತರ ದೇವಸ್ಥಾನ ಪ್ರವೇಶವನ್ನು ಸಾಧ್ಯವಾದಷ್ಟು ವಿರೋಧಿಸಿದ್ದ ಸ್ಥಳೀಯ ಕೆಲವು ಜಾತಿವಾದಿ ಗಣ್ಯರು “ಕೀಳು ಜಾತಿಯವರು ದೇವಸ್ಥಾನಕ್ಕೆ ಬಂದಿದ್ದೇ ದೇವಸ್ಥಾನಕ್ಕೆ ಸಿಡಿಲು ಹೊಡೆಯಲು ಕಾರಣ” ಎಂದುಮೌಢ್ಯತೆಯ ವದಂತಿಯೊಂದನ್ನು ಊರೆಲ್ಲಾ ಹಬ್ಬಿಸಿ ನಗಣ್ಯರಾದರು, ಕೆಲವು ವರ್ಷಗಳ ನಂತರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಾಗ ಎಲ್ಲರೊಂದಿಗೆ ದಲಿತರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

80ರ ದಶಕದ ಕೊನೆಯಲ್ಲಿ ಇದೇ ದೇವಸ್ಥಾನದ ಪಕ್ಕದಲ್ಲಿರುವ ಗಗನೆತ್ತರದ ಬೆಟ್ಟದಂಥ ಬಂಡೆಗಲ್ಲಿಗೆ ಹೊರ ರಾಜ್ಯದ ಗಣಿ ಧಣಿಗಳಿಂದ ಮತ್ತೊಂದು ಗಂಡಾಂತರ ಬಂದೊದಗಿತ್ತು. ದೇವಸ್ಥಾನದ ಪಕ್ಕದ ಬೆಟ್ಟದಂಥ ಬಂಡೆಯಲ್ಲಿ ಗಣಿಗಾರಿಕೆ ಆರಂಭಿಸಲು ದೊಡ್ಡ ಮಟ್ಟದ ತಯಾರಿ ನಡೆದಿತ್ತು. ಆ ಬೃಹತ್ ಬಂಡೆಗೆ ಸ್ಫೋಟಕವಿಟ್ಟು ಗಣಿಗಾರಿಕೆ ಆರಂಭಿಸಿದರೆ ದೇವಸ್ಥಾನಕ್ಕೂ ಅಪಾಯವಿದೆ , ಸುತ್ತಮುತ್ತಲಿನ ನೂರಾರು ಮನೆಗಳೂ, ಗದ್ದೆಗಳು,
ಕೃಷಿ ಭೂಮಿ, ತೋಟ, ಕೆರೆ, ಬಾವಿ ಯಾವುದೂ ಉಳಿಯುವುದಿಲ್ಲ ಎಂಬ ಅಪಾಯವನ್ನರಿತ ಸ್ಥಳೀಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುಖಂಡರಾದ ಅಣ್ಣು ಸಾಧನ ನೇತೃತ್ವದಲ್ಲಿ ಗಣಿಗಾರಿಕೆ ಪ್ರದೇಶದ ಸರ್ವೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸರ್ವೆ ಕಾರ್ಯವನ್ನು ತಡೆದಿದ್ದರು.
ಈ ಘಟನೆ ನಡೆಯುವ ಹೊತ್ತಿಗೆ ಸಮತಾ ಸೈನಿಕ ದಳದಲ್ಲಿ ಸಕ್ರೀಯರಾಗಿದ್ದ ಪಿ.ಡೀಕಯ್ಯರವರು ಊರಲ್ಲಿರಲಿಲ್ಲ. ಆದರೆ ಊರಿನಲ್ಲಿ ತಲೆ ಎತ್ತಲಿರುವ ಬೃಹತ್ ಗಣಿಗಾರಿಕೆ ಗಂಡಾಂತರವನ್ನು ತಿಳಿದು ಗಂಭೀರವಾಗಿ ಪರಿಗಣಿಸಿದ ‌ಡೀಕಯ್ಯರವರು ಮುಂಚೂಣಿಯಲ್ಲಿ ನಿಂತು ದಲಿತ ಸಂಘರ್ಷ ಸಮಿತಿ, ಸಮತಾ ಸೈನಿಕ ದಳ, ರೈತಸಂಘ, ಪರಿಸರ ಸಂಘಟನೆಗಳ ಒಕ್ಕೂಟ ರಚಿಸಿಕೊಂಡು ಗಣಿಗಾರಿಕೆಯಿಂದ ಊರವರಿಗೆ ಮತ್ತು ಊರಿನ ದೇವಸ್ಥಾನಕ್ಕಾಗಬಹುದಾದ ಪಾರಿಸಾರಿಕ ಅಪಾಯದ ಕುರಿತು ಜನರಲ್ಲಿ ಕರಪತ್ರ ಜಾಗೃತಿ ಮೂಡಿಸಿ ಪರಿಣಾಮಕಾರಿ ಪ್ರತಿರೋಧ ವ್ಯಕ್ತಪಡಿಸಿದರು. ಈ ದಲಿತರ ಪರಿಸರಪರ ಹೋರಾಟಕ್ಕೆ ಊರವರಿಂದಲೂ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು. ಆ ಮೂಲಕ ಗಣಿ ಧಣಿಗಳು ಈ ಬೆಟ್ಟದಂಥ ಬಂಡೆಯ ತಂಟೆಗೆ ಮುಂದೆಂದೂ ಬರದಂತೆ ಗಣಿಗಾರಿಕೆಗಾಗಿ ಇತ್ತ ಕಾಲಿಡದಂತೆ ಶಾಶ್ವತವಾದ ಎಚ್ಚರಿಕೆ ನೀಡಿದ
ಅಂದಿನ ದಲಿತ ನಾಯಕರಾದ ಪಿ.ಡೀಕಯ್ಯ , ಅಣ್ಣು ಸಾಧನ ಮುಂತಾದವರು ಪ್ರಮುಖರಾಗಿ ಗುರುತಿಕೊಂಡವರು.

ಹೋರಾಟಗಾರ, ಚಿಂತಕ, ವಾಗ್ಮಿ, ಡೀಕಯ್ಯರವರ ಹೋರಾಟದ ಹಾದಿಯಲ್ಲಿ ಚಳುವಳಿಯ ಪುಟಗಳಲ್ಲಿ ಇಂಥ ಅನೇಕ ಮಹತ್ವದ ಘಟನೆಗಳು, ಸ್ಮರಣಾರ್ಹ ಸಂಗತಿಗಳು, ಶ್ಲಾಘನಾರ್ಹ ಪ್ರಸಂಗಗಳು, ಉಲ್ಲೇಖಾರ್ಹ ಚಿತ್ರಣಗಳು ಅಗೆದಷ್ಟೂ ಇರಬಹುದೆಂಬುದೂ ಗಮನಾರ್ಹ.

1996ರಲ್ಲಿ ತುಳು ಕವಯತ್ರಿ ಆತ್ರಾಡಿ ಅಮೃತಾ ಶೆಟ್ಟಿ ಅವರನ್ನು ಬೌದ್ಧ ಪದ್ಧತಿಯಂತೆ ವಿವಾಹವಾದರು. ತಮ್ಮ ಅನುಯಾಯಿಗಳಿಗೆ ಅಭಿಮಾನಿಗಳಿಗೆ ಮುಖ್ಯವಾಗಿ ಹಿಂದೂ ಸಮಾಜವನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದರೂ ಸಾಮಾಜಿಕ ಪಿಡುಗುಗಳಿಂದ ಪೀಡಿತರಾಗಿ ಧಾರ್ಮಿಕ , ಸಾಂಸ್ಕೃತಿಕ ಸಂತ್ರಸ್ತರಂತೆ ಬದುಕುತ್ತಿರುವ ದಲಿತರಿಗೆ ತಮ್ಮದೇ ಮದುವೆಯ ಮೂಲಕ ಒಂದು ಚಾರಿತ್ರಿಕ ಸಂದೇಶವನ್ನು ಕೊಟ್ಟರು.
ನಂತರದ ದಶಕದಲ್ಲಿ ಜಿಲ್ಲೆಯಲ್ಲಿ ನಡೆದ ಬಹುತೇಕ ಅಂತರ್ಜಾತಿ ವಿವಾಹಗಳು ಮತ್ತು ಗಣನೀಯ ಸಂಖ್ಯೆಯ ದಲಿತರ ಮದುವೆಗಳು ಬೌದ್ಧ ಪದ್ಧತಿಯಂತೆ ನಡೆದವು. ಇನ್ನೊಂದೆಡೆ ಬೌದ್ಧ ಧಮ್ಮಾನುಯಾಯಿಗಳ ಸಂಖ್ಯೆಯೂ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಾ ಹೋಯಿತು.

ಮದುವೆಯ ಬಳಿಕ ವೇಣೂರು ಸಮೀಪದ ಗರ್ಡಾಡಿ ಬಳಿ ಸ್ವಂತ ಮನೆ ಮಾಡಿಕೊಂಡು ನೆಲೆಸಿದ್ದ ಡೀಕಯ್ಯ ಅಮೃತಾ ದಂಪತಿ
ಚಳುವಳಿಯ ನಂಟು ಬಿಡದೆ ರಾಜ್ಯದ ಮೂಲೆ ಮೂಲೆಗಳ ಚಳುವಳಿಯ ಸಹಪಾಠಿಗಳು ಮತ್ತು ರಾಜ್ಯ ನಾಯಕರೊಂದಿಗಿನ ಮೂರ್ನಾಲ್ಕು ದಶಕದ ಒಡನಾಟವನ್ನು ಜೋಪಾನವಾಗಿ ಉಳಿಸಿಕೊಂಡವರು. ಸಮಾಜ ಪರಿವರ್ತನಾ ಚಳುವಳಿಯ ಅನೇಕ ಪೂರಕ ಕಾರ್ಯಕ್ರಮಗಳಲ್ಲಿ ಅಪಾರ ಅಭಿಮಾನದಿಂದ ಅವರು ಪಾಲ್ಗೊಳ್ಳುತ್ತಿದ್ದರು.

ಮುಂದೊಂದು ದಿನ ಒಳ ಮೀಸಲಾತಿಯ ಸಾಂವಿಧಾನಿಕ ಹಕ್ಕುಗಳಿಂದ ತನ್ನ ಸಮುದಾಯವು ವಂಚಿತವಾಗುವ ಅಪಾಯವಿದೆ ಎಂಬುದರ ಬಗ್ಗೆ ಎರಡೂವರೆ ದಶಕದಿಂದೀಚೆಗೆ ಆಳವಾಗಿ ಚಿಂತಿಸುತ್ತಿದ್ದ ಪಿ.ಡೀಕಯ್ಯ ತಮ್ಮ ಒಡನಾಡಿಗಳಲ್ಲಿ ಈ ಬಗ್ಗೆ ಪ್ರಬುದ್ಧವಾಗಿ ಚರ್ಚಿಸುತ್ತಿದ್ದರು.
ಒಳ ಮೀಸಲಾತಿಯಿಂದ ತನ್ನ ಸಮುದಾಯ ಯಾವುದೇ ಕಾರಣಕ್ಕೂ ವಂಚಿತವಾಗಬಾರದೆಂಬ ಮುಂದಾಲೋಚನೆಯಲ್ಲಿ ಅಂಬೇಡ್ಕರ್ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ದಲಿತರು ಜಾಗೃತಿಗಾಗಿ, ವಿಮೋಚನೆಗಾಗಿ, ಸ್ವಾವಲಂಬನೆಗಾಗಿ ಸ್ವಾಭಿಮಾನಕ್ಕಾಗಿ ಉಪ ‘ಜಾತಿ’ ಸಂಘಟನೆಯಡಿಯಲ್ಲಿ ಒಂದಾಗಿ ತಮ್ಮ ಅಸ್ಮಿತೆಯನ್ನು ಸರಕಾರಕ್ಕೆ ತಲುಪಿಸಬೇಕು ಎಂಬುದನ್ನು ಪ್ರತಿಪಾದಿಸುತ್ತಿದ್ದ ಡೀಕಯ್ಯರವರು ಜಾತಿ ಸಂಘಟನೆಯನ್ನೂ ಕಟ್ಟಿ ಜಾತಿ ಸ್ವಾಭಿಮಾನ ಮೂಡಿಸಲು ಶ್ರಮಿಸಿದ್ದರು. ಜಾತಿಯ ಸಾಂಸ್ಕೃತಿಕ ಅವಳಿ ವೀರರಾದ ಕಾನದ-ಕಟದರ ಕುರಿತು ಮೌಖಿಕ ಸಾಹಿತ್ಯಾಧಾರಿತವಾಗಿ ಪುಟ್ಟ ಪುಸ್ತಕವೊಂದನ್ನು ಬರೆಯುವ ಮೂಲಕ ಅಳಿವಿನ ಅಂಚಿನಲ್ಲಿದ್ದ ಸಾಂಸ್ಕೃತಿಕ ವೀರರ ಚರಿತ್ರೆಯನ್ನು ಪುನರ್ ನಿರ್ಮಿಸುವ ಕಾರ್ಯಕ್ಕೂ ಕೈ ಹಾಕಿದರು. ಹಾಗೂ ತುಳುನಾಡಿನಲ್ಲಿ ಊಳಿಗಮಾನ್ಯ ಪದ್ಧತಿಯ ವಿರುದ್ಧ ಹೋರಾಡಿದ ಕಾನದ -ಕಟದರ ವೀರಗಾಥೆ ಮತ್ತು ಆದರ್ಶವನ್ನು ಸಮುದಾಯದ ನಡುವೆ ತಲುಪಿಸಲು ಸಮಾವೇಶ, ಶಿಬಿರ ಇತ್ಯಾದಿಗಳನ್ನು ಸಂಘಟಿಸಲು ಯುವಕರನ್ನು ಪ್ರೇರೇಪಿಸುತ್ತಿದ್ದರು.
ಅವಳಿ ವೀರರಾದ ಕಾನದ – ಕಟದರ ಜೀವಿತವಧಿಯ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾದ ಮೂಡಬಿದ್ರೆ ಮಿಜಾರು ಕಿಜನೊಟ್ಟು ಬರ್ಕೆ, ಪಾಜೆಗುಡ್ಡೆ, ಬಂಗಾಡಿ ಮುಂತಾದ ಚಾರಿತ್ರಿಕ ಸ್ಥಳಗಳಿಗೆ ತಮ್ಮ ಒಡನಾಡಿಗಳನ್ನು ಕರೆದೊಯ್ದು ಚಾರಿತ್ರಿಕ ಜಾಗೃತಿಯನ್ನು ಮೂಡಿಸಿದ ಸಮುದಾಯಪರ ಚಿಂತಕರಾಗಿದ್ದರು ಎಂಬುದನ್ನು ಮರೆಯಲಾಗದು.

ತುಳುನಾಡಿನಲ್ಲಿ ಬಹುತೇಕ ಯಕ್ಷಗಾನ ಮೇಳಗಳಲ್ಲಿ ದಲಿತರಿಗೆ ಡೇರೆ ಕಟ್ಟಲು, ಪರದೆ ಸರಿಸಲು, ಚಕ್ರತಾಳ ಹೊಡೆಯಲು ಹೆಚ್ಚೆಂದರೆ ಪ್ರಸಂಗದಲ್ಲಿ ‘ದೂತ’ರಾಗುವ ಅವಕಾಶ ಮಾತ್ರ ಸಿಗುತ್ತಿದ್ದ ಕಾಲದಲ್ಲಿ ದಲಿತ ಯುವಕರಿಗೆ ಜಿಲ್ಲೆಯ ವಿವಿಧೆಡೆ ಯಕ್ಷಗಾನ ಕಮ್ಮಟಗಳನ್ನು
ಆಯೋಜಿಸಿ ಆಸಕ್ತ ಯಕ್ಷಗಾನ ಪ್ರಿಯರನ್ನು ಹುಡುಕಿ ಜಿಲ್ಲೆಯ ಹಿರಿಯ ಕಲಾವಿದರಿಂದ, ಪ್ರಸಂಗ ಕರ್ತರಿಂದ, ಭರತನಾಟ್ಯ ಪಟುಗಳಿಂದ, ಸಾಹಿತಿಗಳಿಂದ ಯಕ್ಷಗಾನ ಕುಣಿಕೆ, ಮಾತುಗಾರಿಕೆ, ಬಣ್ಣಗಾರಿಕೆ, ಅಭಿನಯ, ಅರ್ಥಗಾರಿಕೆಗಳನ್ನು ಕಲಿಸಿ ‘ಆಟಕೂಟ ತುಳುನಾಡ್- ಪದ್ಮುಂಜ” ಎಂಬ ದಲಿತರ ಸ್ವತಂತ್ರ ಯಕ್ಷಗಾನ ಮೇಳವನ್ನು ಸಂಘಟಿಸಿ ಸಮಾಜ ಪರಿವರ್ತನೆಗೆ ಅಥವಾ ವೈಚಾರಿಕ ಜಾಗೃತಿ ಮೂಡಿಸಲು , ಇತಿಹಾಸದ ಅರಿವು ಮೂಡಿಸಲು ಯಕ್ಷಗಾನ ಮಾಧ್ಯಮದಿಂದಲೂ ಸಾಧ್ಯವೆಂಬುದನ್ನು ಪ್ರಯೋಗದ ಮೂಲಕ ಮಾಡಿ ತೋರಿಸಿದರು.

ಬೆಂಗಳೂರಿನಲ್ಲಿ 90ರ ದಶಕದಲ್ಲಿ ನಡೆದ “ಮೂಲ ಭಾರತೀಯರ ಸಮ್ಮೇಳನ”ದಲ್ಲಿ ವಿಚಾರ ಮಂಡಿಸಿದ್ದರು. ಇದೇ ಸಮ್ಮೇಳನದಲ್ಲಿ
ತಾವೇ ಕಟ್ಟಿದ ಯಕ್ಷಗಾನ ಮೇಳದ ಕಲಾವಿದರನ್ನು ಕರೆದೊಯ್ದು ತುಳುನಾಡ ಬಲಿಯೇಂದ್ರ, ಕೋಟಿ-ಚೆನ್ನಯ ಮುಂತಾದ ಪ್ರಸಂಗಗಳನ್ನು ಆಡಿ ತೋರಿಸಿದವರು ಪಿ. ಡೀಕಯ್ಯ ಮತ್ತು ಬಳಗದವರು. ಸ್ವತಃ ಯಕ್ಷಗಾನ ಪಾತ್ರಧಾರಿಯಾಗಿ ಬಂದರೆ ಯಕ್ಷಗಾನ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ
ತಮ್ಮ ಪಾತ್ರದ ಸಂಭಾಷಣೆಯ ಮೂಲಕ ರಂಗಸ್ಥಳದಲ್ಲಿ ಸಾಮಾಜಿಕ ಪರಿವರ್ತನೆಯ ಮಾತುಗಳನ್ನಾಡುತ್ತಿದ್ದರು.

ಬಿಎಸೆನೆಲ್ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಡೀಕಯ್ಯರವರು ಕರ್ತವ್ಯದ ಒತ್ತಡಗಳ ನಡುವೆಯೂ ಗರಿಷ್ಠ ಸಮಯವನ್ನು ಚಳುವಳಿಯ ಚಟುವಟಿಕೆಗಳಿಗಾಗಿ ಮೀಸಲಿಡುತ್ತಿದ್ದ ಕಾಲವೊಂದಿತ್ತು. ಮೂರು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಅವರ ನಿವೃತ್ತಿ ಜೀವನದಿಂದ ರಾಜ್ಯದ ಬಹುಜನ ಸಮಾಜ ಚಳುವಳಿಗೆ ವಿಶೇಷವಾಗಿ ದ.ಕ. ಜಿಲ್ಲೆಯ ಚಳುವಳಿಗೆ ಆನೆ ಬಲ ಬರಬಹುದು ಅರ್ಥಾತ್ ಹೊಸ ಚೈತನ್ಯ ತುಂಬಬಹುದೆಂಬ ಬಲವಾದ ನಿರೀಕ್ಷೆಯೂ ಇತ್ತು. ಆದರೆ ನಿವೃತ್ತಿಯ ಬಳಿಕವಾದರೂ ಚಳುವಳಿಯೇ ಅವರ ವಿದ್ವತ್ತನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತೋ ಅವರೇ ಚಳುವಳಿಯಿಂದ ದೂರ ಉಳಿದರೋ ಎಂಬುದರ ಕುರಿತು ಚಳುವಳಿಯ ಚಾವಡಿಯಲ್ಲಿ ಇಂದಿಗೂ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ದಶಕದ ಹಿಂದೆ ಜಿಲ್ಲೆಯ ಚಳುವಳಿಯಲ್ಲಿ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದ್ದ ಕೆಲವೊಂದು ಗಂಭೀರ ವಿದ್ಯಮಾನಗಳು ಪಿ.ಡೀಕಯ್ಯರವರನ್ನು ಚಳುವಳಿಯಲ್ಲಿ ನಿರೀಕ್ಷೆಯಂತೆ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಸೂಕ್ತ ‘ವಾತಾವರಣ’ ಒದಗಲಿಲ್ಲವೇ? ಇದೇ ಬೆಳವಣಿಗೆಯಿಂದ ಚಳುವಳಿಯ ವಿಚಾರದಲ್ಲಿ ಡೀಕಯ್ಯರವರನ್ನು ತಾತ್ಕಾಲಿಕವಾಗಿ ತಟಸ್ಥ ನಿಲುವು ತಳೆಯುವಂತೆ ಮಾಡಿರಬಹುದೇ?ಎಂಬಿತ್ಯಾದಿ ಪ್ರಶ್ನೆಗಳೂ ಮುನ್ನೆಲೆಗೆ ಬಂದಿತ್ತು.

ಬಹುಜನ ಸಮಾಜಕ್ಕೆ ಸಂವಿಧಾನ ರಕ್ಷಣೆಯ ಬಗ್ಗೆ ಸರಳವಾಗಿ ಅರಿವು ಮೂಡಿಸಲು “ಭಾರತೀಯ ಸಂವಿಧಾನ ಪರಾಮರ್ಶೆ -ಒಂದು ಪ್ರಶ್ನೋತ್ತರ ” ಎಂಬ ಕಿರುಪುಸ್ತಕವೊಂದನ್ನು ಅಮೃತಾ ಡೀಕಯ್ಯ ದಂಪತಿ ಹೊರ ತಂದಿದ್ದರು. ಕೃತಿಗಳನ್ನು ಪ್ರಟಸಿದ್ದಾಗಲಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾಗಲಿ ಕಡಿಮೆ ಇರಬಹುದು , ಆದರೆ ಅವರು ಉತ್ತಮ ಬರಹಗಾರರೂಅದ್ಭುತ ಅಭಿವ್ಯಕ್ತಿ ಚತುರರೂ ಆಗಿದ್ದರು.
ಕನ್ನಡ ಭಾಷೆಯಲ್ಲಿ ಭಾಷಣಕ್ಕೆ ನಿಂತರೆ ಸಭಾಂಗಣದಲ್ಲಿ ಸೇರಿದವರು ವಿದ್ಯಾವಂತರಾಗಿರಲಿ, ಅವಿದ್ಯಾವಂತರಾಗಿರಲಿ ಹೇಳಬೇಕಾದ ವಿಚಾರವನ್ನು ಮಸ್ತಕ ಗೋಡೆಯಲ್ಲಿ ಹೋಗಿ ಅಂಟಿಸಿ ಬರುವಂತಿರುತಿತ್ತು. ಡೀಕಯ್ಯರವರ ತುಳು ಭಾಷಣದ ಮಧ್ಯೆ ಬರುತ್ತಿದ್ದ ಅಪ್ಪಟ ತುಳು ಶಬ್ದಗಳು ವಿದ್ಯಾವಂತರಿಗೆ ಎಷ್ಟರ ಮಟ್ಟಿಗೆ ಅರ್ಥವಾಗುತ್ತಿತ್ತೋ ಗೊತ್ತಿಲ್ಲ, ಆದರೆ ಅನಕ್ಷರಸ್ಥರಿಗೆ, ಹಿರಿಯರಿಗೆ ಡೀಕಯ್ಯ (ಮತ್ತು ಅಮೃತಾ) ಅವರ ತುಳು ಭಾಷಣವೆಂದರೆ ಬಹಳ ಆಪ್ತ. ಪಿ.ಡೀಕಯ್ಯರವರ ಭಾಷಣದಲ್ಲಿ ಕನ್ನಡದಷ್ಟೇ ನಿರರ್ಗಳವಾಗಿ ಮತ್ತು ಅಷ್ಟೇ ಪ್ರಬುದ್ಧವಾಗಿ ಇಂಗ್ಲೀಷ್ ಮಾತನಾಡುತ್ತಿದ್ದರು ಎಂಬುದು ಕೇಳಿದವರಿಗೆ ಮಾತ್ರ ಗೊತ್ತಿದೆ. 4 ವರ್ಷಗಳ ಹಿಂದೆ ಮಂಗಳೂರು ಆಕಾಶವಾಣಿಗೆ ‘ಚಿಂತನ’ ಧ್ವನಿಮುದ್ರಣಕ್ಕೆ ಹೋಗಿದ್ದ ಸಂದರ್ಭ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪೂರ್ಣವಾಗಿ ಚೇತರಿಸಿಕೊಂಡಿದ್ದರು.

ಸುಮಾರು ಒಂದೂವರೆ ದಶಕದಿಂದ ಚಳುವಳಿಯಿಂದ ದೂರ ಉಳಿದಿದ್ದರೂ ಚಳುವಳಿಯ ಸೈದ್ಧಾಂತಿಕ ಕಾವಲುಗಾರನಂತೆ ಬದುಕುತ್ತಿದ್ದಪಿ.ಡೀಕಯ್ಯರವರ ಮೇಲೆ ಜಿಲ್ಲೆಯ ಬಹುಜನ ಸಮಾಜ ಚಳುವಳಿಯ ಕಾರ್ಯಕರ್ತರು ಅದೆಷ್ಟೋ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಇತ್ತ ಮಾತೃ ಸಮುದಾಯದ ನಾಯಕರೂ ಅನೇಕ ನಿರೀಕ್ಷೆಯಲ್ಲಿದ್ದರು. ಬಹುಜನ ಸಮಾಜ ಚಳುವಳಿಗೂ ದಲಿತ ಚಳುವಳಿಗೂ ಸಮುದಾಯ ಸಂಘಟನೆಯಲ್ಲಿ ತೊಡಗಿರುವ ಅತಂತ್ರ ನಾಯಕರಿಗೂ ಪಿ.ಡೀಕಯ್ಯರವರ ಮಾರ್ಗದರ್ಶನದ ಅಗತ್ಯವಿತ್ತು.

ಅವರ ನಿವೃತ್ತಿಯ ಬೆನ್ನಲ್ಲೇ ಕೆಲವು ರಾಜಕೀಯ ಪಕ್ಷಗಳ ನಾಯಕರು ಮನೆಯ ಬಾಗಿಲು ತಟ್ಟಲು ಹೊಂಚು ಹಾಕುತ್ತಿದ್ದರು.
ಶತ್ರುಗಳಿಗಾದರೂ ಅರಿವಿತ್ತು : ಈ ನಾಯಕ ಬಹುಜನ ಸಮಾಜ ಚಳುವಳಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಇಳಿದು ಹೋದರೆ ಮುಂದೊಂದು ದಿನ ನಮ್ಮ ರಾಜಕೀಯ ಬೆಳವಣಿಗೆಗೂ ಈತ ನುಂಗಲಾರದ ತುತ್ತಾಗಬಹುದೆಂದು..!!ಆದರೆ ತಟ್ಟಲೇ ಬೇಕಾದವರು ಯಾರೂ ಇವರ ಮನೆಯ ಬಾಗಿಲನ್ನು ಕೊನೆಗೂ ತಟ್ಟಲೇ ಇಲ್ಲ ಎನ್ನುವುದೇ ವಿಷಾದನೀಯ.!

ಇಂದು ‘ಹುದ್ದೆ’ಗೆ ಅಂಟಿಕೊಂಡು ಚಳುವಳಿಯನ್ನು ‌ಸಕ್ರೀಯವಾಗಿಡಲು ಸರಣಿ ಇಶ್ಯೂಗಳಿದ್ದರೂ ಕೈಚೆಲ್ಲಿ ಕುಳಿತವರಂತೆ ಇತ್ತ ಕಾರ್ಯಕರ್ತರಲ್ಲಿ ಉತ್ಸಾಹವನ್ನೂ ಮೂಡಿಸದೆ ಅತ್ತ ಆಶಾದಾಯಕ ಕಾರ್ಯಕ್ರಮಗಳನ್ನು ಆಯೋಜಿಸದೆ ಚಳುವಳಿಯನ್ನು ಅಥವಾ ಸಂಘಟನೆಗಳನ್ನು ನಿಂತ ನೀರಿನಂತೆ ಮಾಡಿ ಕಾಲಹರಣ ಮಾಡುತ್ತಿರುವ ನಾಯಕರು ಈ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.

ಏನೇನೋ ನೆಪದಲ್ಲಿ ಚಳುವಳಿಗೆ, ಸಂಘಟನೆಗೆ ಸುತ್ತಲೂ ದೌರ್ಬಲ್ಯದ ‘ಬೇಲಿ’ ಕಟ್ಟಿಕೊಂಡು ಹುದ್ದೆಯ ವ್ಯಾಮೋಹದಲ್ಲಿ ಎಡವಿದರೆ ಮತ್ತೆ ಕೈಹಿಡಿದು ಮೇಲೆತ್ತಲು ಯಾರೂ ಜೊತೆಗಿರುವುದಿಲ್ಲ : ಎಂಬುದನ್ನು ಅರ್ಥ ಮಾಡಿಕೊಳ್ಳವುದಕ್ಕೆ ಇದೊಂದು ಸೂಕ್ತ ಕಾಲದಂತೆ ತೋರುತ್ತದೆ.ಅವರಂತೂ ಕೊನೆವರೆಗೂ ಯಾರ ಕೈಗೂ ಸಿಗದೆ ಗಟ್ಟಿ ಧ್ವನಿಯ ಪಿ.ಡೀಕಯ್ಯರಾಗಿಯೇ ತ್ರಿಸರಣದ ನೆರಳಲ್ಲಿ ಗಾಢ ಧ್ಯಾನಸ್ಥರಾಗಿ ಉಳಿದರು. ಚಳುವಳಿಯ ಪ್ರೇಮಿಗಳು, ಅನುಯಾಯಿಗಳು, ಗುರು ಸಮಾನರಾದ ಹಿರಿಯ ಜೀವ ಡೀಕಯ್ಯರವರಿಗೆ ಅಂತಿಮ ನಮನ ಸಲ್ಲಿಸಿ ಒಂದಾಗಿ ಒಕ್ಕೊರಲಿನಿಂದ ಕೂಗಿದ ‘ಜೈಭೀಮ್’ ಮುಗಿಲು ಮುಟ್ಟಿತು ಅಷ್ಟೆ!

ಡೀಕಯ್ಯರವರು ಒಬ್ಬ ಪ್ರಬುದ್ಧ ನಾಯಕರಾಗಿ ಹೇಳುವುದನ್ನೆಲ್ಲಾ ಬಾಕಿ ಇಟ್ಟು ಬಹುಜನ ಸಮಾಜದ ವಿಮೋಚನೆಯ ಕನಸು ಹೊತ್ತ ದಲಿತರನ್ನು ಅರ್ಧ ಶತಮಾನದಿಂದ ಕಾಡುತ್ತಿದ್ದ ನಿರೀಕ್ಷೆಗಳ ಕಿಟಕಿಗೊಂದು ನೀಲಿ ಪರದೆ ಮುಚ್ಚಿಕೊಂಡು ಮಹಾಗುರು ಭೀಮರಾಯರ ಕೈಕುಲುಕಲು ತರಾತುರಿಯಲ್ಲಿ ಹೋಗಿಯೇ ಬಿಟ್ಟರು.! ಹೌದು.. ನಾಡಿನ ಭೀಮ ಸೇನಾನಿಗಳಿಗೊಂದು ಧೈರ್ಯ ತುಂಬುವ ಜೈಭೀಮ್ ಹೇಳದೆ ಭೂತಾಯಿ ಮಡಿಲಿನಲ್ಲಿ ಲೀನವಾದರು. ಅಭಿಮಾನ ಪೂರ್ವಕ ಶೋಕದ ಬೀಳ್ಕೊಡುಗೆಯೂ ಮುಗಿಯಿತು ಇನ್ನೇನು? ಕೊನೆಯದಾಗಿ ಹೇಳುವುದೇನು? ನಾಡಿನ ದಲಿತ ಚಳುವಳಿಯ ಇತಿಹಾಸದ ಪುಟದಲ್ಲಿ ಪಿ.ಡೀಕಯ್ಯ ಎಂಬ ಹೆಸರೊಂದು ದಂತ ಕಥೆಯಾಗಿ ಉಳಿಯಿತಷ್ಟೆ!

🔹ಅಚುಶ್ರೀ ಬಾಂಗೇರು.

Related Posts

Leave a Reply

Your email address will not be published.