ಮಣಿಪಾಲ : ಪದ್ಮವಿಭೂಷಣ ಡಾ.ಎಂ.ಎಸ್ ವಲಿಯಾಥನ್ ನಿಧನ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಮಾಜಿ ಕುಲಪತಿ, ವಿಶ್ವ ವಿಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಹಾಗೂ ಖ್ಯಾತ ಶಿಕ್ಷಣ ತಜ್ಞ ಪ್ರೊಫೆಸರ್ ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ (ಎಂ ಎಸ್ ವಲಿಯಥಾನ್) ತನ್ನ 90 ನೇ ವಯಸ್ಸಿನಲ್ಲಿ ಮಣಿಪಾಲದಲ್ಲಿ ನಿಧನರಾದರು.

ಪ್ರೊ. ವಲಿಯಾಥನ್ ಅವರು ಹೃದಯ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ತಂತ್ರಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ. ಅವರು ತಿರುವನಂತಪುರ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರ್ಗ್, ಇಂಗ್ಲೆಂಡ್ ಮತ್ತು ಕೆನಡಾದಿಂದ ಫೆಲೋಶಿಪ್ ಪಡೆದಿದ್ದರು.

ತಿರುವನಂತಪುರದಲ್ಲಿ ಶ್ರೀ ಚಿತ್ರ ತಿರುನಾಳ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ.ವಲಿಯಾಥನ್ ಇಪ್ಪತ್ತು ವರ್ಷಗಳ ಕಾಲ ಹೃದಯ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಡಿಸ್ಪೋಸಬಲ್ ಬ್ಲಡ್ ಬ್ಯಾಗ್ ಮತ್ತು ಟಿಲ್ಟಿಂಗ್ ಡಿಸ್ಕ್ ಹೃದಯ ಕವಾಟದಂತಹ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಕೊಡುಗೆ ಭಾರತದ ವೈದ್ಯಕೀಯ ಸಾಧನಗಳ ಉದ್ಯಮಕ್ಕೆ ಅಡಿಪಾಯವನ್ನು ಹಾಕಿತ್ತು .

ಪ್ರೊಫೆಸರ್ ವಲಿಯಾಥನ್ ಅವರು 1993 ರಿಂದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಯ ಮೊದಲ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು . ಮಾಹೆ ಮಣಿಪಾಲದಲ್ಲಿನ ಅವರ ಅಧಿಕಾರಾವಧಿಯು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಂಶೋಧನೆಯಲ್ಲಿನ ಹೊಸತನದ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. ಅವರ ನಾಯಕತ್ವದಲ್ಲಿ, ಮಾಹೆಯು ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಿತು. ಉನ್ನತ ಶಿಕ್ಷಣದಲ್ಲಿ ಮತ್ತು ಸಂಶೋಧನಾ ವಲಯದಲ್ಲಿ ಗಣನೀಯವಾಗಿ ಸಾಧನೆ ಮಾಡಲು ನಾಂದಿಯಾಯಿತು.

ಡಾ.ವಲಿಯಥಾನ್ ನಿಧನಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

Related Posts

Leave a Reply

Your email address will not be published.