ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‍ಗೆ ಮತ್ತೊಮ್ಮೆ “ಬ್ಲೂ ಫ್ಲ್ಯಾಗ್” ಕಿರೀಟ
ಸದಾ ಬದುಕಿನ ಜಂಜಾಟ ಕೆಲಸದ ಒತ್ತಡದ ನಡುವೆಯೂ ‘ಓ ಮನವೇ ರಿಲಾಕ್ಸ್ ಪ್ಲೀಸ್ ‘ ಎನ್ನುವ ಮನಗಳಿಗೆ ಮುದ ನೀಡುವಂತಹ ಬೀಸುವ ತಂಗಾಳಿಯ ಕಡಲ ಅಲೆಗಳ ನರ್ತನ ಮತ್ತೊಂದೆಡೆ ರಮ್ಯ ರಮಣೀಯ ಕಾಮಿನಿ ಹೊಳೆಯ ನಡುವೆ ಪ್ರವಾಸಿಗರನ್ನು ಕೈ ಬೀಸಿ ಸೆಳೆಯುತ್ತಿರುವ ಪ್ರಕೃತಿ ಸೌದರ್ಯದ ಸೊಬಗೇ ಪಡುಬಿದ್ರಿಯ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್.ಪ್ರವಾಸ್ಯೋದ್ಯಮ ಇಲಾಖೆ ಉಡುಪಿ ಜಿಲ್ಲೆಯ ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್ ಮನಮೋಹಕವಾಗಿ ಕಂಗೊಳಿಸುತ್ತಿದ್ದು ಲಕ್ಷಾಂತರ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಪೌಂಡೇಶನ್ ಫಾರ್ ಎನ್ವಾರ್ನ್ಮೆಂಟಲ್ ಎಜ್ಯುಕೇಶನ್ (ಡೆನ್ಮಾರ್ಕ್) ಸಂಸ್ಥೆಯ ಬ್ಲೂ ಫ್ಲಾಗ್ ಪರಿಕಲ್ಪನೆಯ ವಿಶ್ವದರ್ಜೆಯ 33 ಮಾನದಂಡಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿರುವ ಭಾರತದ ಕೆಲವೇ ಕೆಲವು ಬೀಚ್ಗಳ ಪೈಕಿ ಪಡುಬಿದ್ರಿ ಎಂಡ್ ಪಾಯಿಂಟ್ ನ ಸಮುದ್ರ ಕಿನಾರೆಗೆ ಸತತ ಮೂರನೇ ಬಾರಿಗೆ ವಿಶ್ವದರ್ಜೆಯ ಬ್ಲೂ ಫ್ಲಾಗ್ ಮಾನ್ಯತೆ ಯೊಂದಿಗೆ ಮನ್ನಣೆ ಲಭಿಸಿರುವುದು ಉಡುಪಿ ಜಿಲ್ಲೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಮಾರ್ಗದರ್ಶನದೊಂದಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಬೀಚ್ ಸಿಬ್ಬಂದಿ ವರ್ಗದ ಕಠಿಣ ಪರಿಶ್ರಮದ ಫಲವಾಗಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ.