ಪಡುಬಿದ್ರಿ : ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಗೆ ನಿರಂತರ ಅಪಘಾತ: ಕಾರು ಪಲ್ಟಿ, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ-ಎರ್ಮಾಳು ಗಡಿಭಾಗ ಸೇತುವೆ ಪ್ರದೇಶದಲ್ಲಿನ ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ವಾಹನಗಳು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಮಳೆ ನೀರು ಹೆದ್ದಾರಿಯಲ್ಲೇ ಶೇಕರಣೆಗೊಳ್ಳುತ್ತಿದ್ದು ಅದರ ಮೇಲಿಂದ ಚಲಿಸುವ ವಾಹನಗಳು ನಿಯಂತ್ರಣ ಕಳೆದುಕೊಂಡು ಡಿವೈಡರ್ ಏರಿ ಪಲ್ಟಿಯಾಗುತ್ತಿದೆ. ಕಳೆದ ರಾತ್ರಿಯೂ ಬೆಂಗಳೂರು ನೋಂದಾಣಿ ಸಂಖ್ಯೆಯ ಭಟ್ಕಳ ಮೂಲದ ವ್ಯಕ್ತಿಗೆ ಸೇರಿದ ಕಾರೊಂದು ಪಲ್ಟಿಯಾಗಿ ಕಾರು ಬಹುತೇಕ ಜಖಂಗೊಂಡಿದ್ದು ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ,
ಅವರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದು, ಹೆದ್ದಾರಿಯಲ್ಲಿ ಶೇಕರಣೆಗೊಂಡಿದ್ದ ಮಳೆ ನೀರು ಗಮನಕ್ಕೆ ಬಾರದೆ ನೀರಿನ ಮೇಲಿಂದ ಚಲಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ವೇಗವಾಗಿಯೇ ರಸ್ತೆ ವಿಭಜಕವೇರಿ ಪಲ್ಟಿಯಾಗಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ ಹೆದ್ದಾರಿ ನಿರ್ಮಾಣವಾಗಿದಂದಿನಿಂದಲೂ ಇದ್ದು ಮಳೆಗಾಲದಲ್ಲಿ ನಿರಂತರ ಅಪಘಾತಗಳು ನಡೆದು ಅದೇಷ್ಟೋ ಅಮಾಯಕ ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತ ಪಡಿಸುತ್ತಾರೆ, ಈ ಬಗ್ಗೆ ಮಾದ್ಯಮಗಳು ಹೆದ್ದಾರಿ ಇಲಾಖೆ ಸಹಿತ ಈ ರಸ್ತೆ ಸಂಚಾರಕ್ಕೆ ಟೋಲ್ ಸಂಗ್ರಹಿಸುವ ಹೆಜಮಾಡಿ ಟೋಲ್ ಪ್ರಮುಖರ ಗಮನಕ್ಕೆ ತಂದರೂ ಸಮಸ್ಯೆ ಇಂದಿಗೂ ಜೀವಂತವಿದ್ದು, ಅಮಾಯಕ ಜನರು ಪ್ರಾಣ ಕಳೆದುಕೊಳ್ಳುವುದನ್ನು ಎದುರು ನೋಡುವಂತ್ತಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.